ರಾಜ್ಯ ಸರ್ಕಾರದಿಂದ ರೈತರಿಗೆ ಹಲವು ಕಾರ್ಯಕ್ರಮ:ಸಚಿವ ಜೆ.ಸಿ. ಮಾಧುಸ್ವಾಮಿ

ಕಲಬುರಗಿ.ಜ.5:ರಾಜ್ಯ ಸರ್ಕಾರವು ರೈತರಿಗೆ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ 2019ನೇ ಸಾಲಿನ ಆಣೆಕಟ್ಟು ಮತ್ತು ಪಿಕಪ್ ಪ್ರಧಾನ ಕಾಮಗಾರಿಗಳ ಯೋಜನೆಯಡಿ ಅಂದಾಜು 7200 ಲಕ್ಷ ರೂ.ಗಳ ವೆಚ್ಚದಲ್ಲಿ ಅಫಜಲಪುರ ತಾಲ್ಲೂಕಿನ ಘೋಳನೂರ ಹಾಗೂ ಮೊಗನಇಟಗಾ ಗ್ರಾಮಗಳ ನಡುವೆ ಭೀಮಾನದಿಗೆ ಅಡ್ಡಲಾಗಿ ಬ್ಯಾರೇಜ್-ಕಂ-ಬ್ರಿಡ್ಜ್ ನಿರ್ಮಾಣ ಮಾಡುವ ಕಾಮಗಾರಿಗೆ ಅವರು ಮಂಗಳವಾರ ಅಡಿಗಲ್ಲು ನೆರವೇರಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗೆ ನೀರು ಮತ್ತು ವಿದ್ಯುತ್ ಬಹುಮುಖ್ಯ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಬಲಿಷ್ಠರಾಗಬೇಕು. ಉತ್ತರ ಕರ್ನಾಟಕದಲ್ಲಿ ಇತ್ತೀಚಿಗೆ ಭೀಮಾಪ್ರವಾಹದಿಂದ ಕೆರೆ ಕಟ್ಟೆಗಳಿಗೆ, ಸೇತುವೆಗಳಿಗೆ ಆಗಿರುವ ಹಾನಿಯನ್ನು ಅಂದಾಜು ಮಾಡಿ ಬುಕ್‍ಲೆಟ್ ತಯಾರಿಸಿ ಆದ್ಯತೆ ಪ್ರಕಾರ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಬ್ಯಾರೇಜ್ ಕಂ ಬ್ರಿಡ್ಜ್ ಕಾಮಗಾರಿಗೆ ಇಂದು ಅಡಿಗಲ್ಲು ನೆರವೇರಿಸಲಾಗಿದ್ದು, ಜೇವರ್ಗಿ ಹಾಗೂ ಅಫಜಲಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೇವರ್ಗಿ ಶಾಸಕರು ಹಾಗೂ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ ಅಜಯಸಿಂಗ್ ಮಾತನಾಡಿ, ಜೇವರ್ಗಿ ತಾಲ್ಲೂಕಿನಲ್ಲಿ 22 ಕೆರೆಗಳನ್ನು ತುಂಬಲು 250 ಕೋಟಿ ರೂ.ಗಳ ತಾಂತ್ರಿಕ ಮಂಡಳಿಯಿಂದ ಅನುಮತಿ ಪಡೆದಿದ್ದು, ಆಡಳಿತಾತ್ಮಕ ಮಂಜೂರಾತಿ ಪಡೆಯಬೇಕಾಗಿದೆ. ಅದಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿಯವರು ಸಹಕರಿಸುವಂತೆ ಕೋರಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಭೀಮಾನದಿಗೆ ಬ್ಯಾರೇಜ್ ನಿರ್ಮಾಣ ಮಾಡುವ ಬೇಡಿಕೆ ಘೋಳನೂರ ಹಾಗೂ ಮೊಗನಇಟಗಾ ಗ್ರಾಮಸ್ಥರದಾಗಿತ್ತು. ಅಫಜಲಪುರ ತಾಲೂಕಿನ ಬೋರಿ ಮತ್ತು ಅಮರ್ಜಾ ನದಿಗಳಿಗೆ ನಿರ್ಮಿಸಿರುವ ಬ್ಯಾರೇಜ್ ಗೇಟ್‍ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ಗೇಟ್‍ಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕೆಂದು ಎಂದು ಸಚಿವರಿಗೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮಾತನಾಡಿ, ಸುಮಾರು 7200 ಲಕ್ಷ ರೂ. ವೆಚ್ಚದ ಘೋಳನೂರ, ಮೊಗನಇಟಗಾ ಸೇತುವೆ 218.75 ಚದರ ಕಿ.ಮೀ ಜಲಾಶಯ ವ್ಯಾಪ್ತಿಹೊಂದಿದ್ದು, 372.50 ಮೀ ಉದ್ದವಾಗಿದೆ ಮತ್ತು 9 ಮೀಟರ ಎತ್ತರವಾಗಿರುತ್ತದೆ. ಇದರಲ್ಲಿ 10.427 ದಶಲಕ್ಷ ಘ.ಮೀ ನೀರನ್ನು ಶೇಖರಣೆ ಮಾಡಬಹುದಾಗಿದೆ ಹಾಗೂ 1750.00 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಲಭ್ಯವಾಗಲಿದೆ. ಬ್ಯಾರೇಜ್ ನಿರ್ಮಾಣದಿಂದ ಅಫಜಲಪುರ ತಾಲ್ಲೂಕಿನ ಘೋಳನೂರ, ದೇಸಾಯಿ ಕಲ್ಲೂರ, ಆನೂರ, ಬಿಲ್ವಾಡ್(ಬಿ), ಬಿಲ್ವಾಡ(ಕೆ), ಬಟಗೇರಾ, ಕೆರಕನಹಳ್ಳಿ, ತೆಲ್ಲೂರ, ಗುಡ್ಡೇವಾಡಿ ಮತ್ತು ಜೇವರ್ಗಿ ತಾಲ್ಲೂಕಿನ ಮೊಗನಿಟಗಾ, ಹರವಾಳ, ಹುಲ್ಲೂರ, ಅಂಕಲಗಾ ಹಾಗೂ ನಾರಾಯಣಪುರ ಗ್ರಾಮಗಳ ರೈತರ ಜಮೀನುಗಳಿಗೆ ಪರೋಕ್ಷವಾಗಿ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಸೇತುವೆಯಿಂದ ಸಿಂದಗಿ ಮತ್ತು ಜೇವರ್ಗಿ ತಾಲೂಕಿಗೆ ಸಂಪರ್ಕಿಸಲು ಅಫಜಲಪುರ ತಾಲ್ಲೂಕಿನ ಜನರಿಗೆ 20 ಕಿ.ಮೀ ರಸ್ತೆಯ ದೂರ ಕಡಿಮೆಯಾಗಲಿದೆ. ಅಲ್ಲದೇ 12 ಕಿ.ಮೀ ಹಿನ್ನೀರು ನಿಲ್ಲಲಿದೆ ಎಂದರು.
ಸುರಪುರ ಮಠದ ಜಗದ್ಗುರು ಸಾರಂಗದರ ದೇಶಿಕೇಂದ್ರ ಶಿವಾಚಾರ್ಯರು, ಅತನೂರಿನ ಅಭಿನವ ಗುರುಬಸವ ಶಿವಾಚಾರ್ಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಮಾಜಿ ವಿಧಾನ್ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಮುಖಂಡರಾದ ಮಕ್ಬುಲ್ ಪಟೇಲ, ಪಪ್ಪು ಪಟೇಲ, ದಯಾನಂದ ದೊಡ್ಡಮನಿ, ಶಿವಾನಂದ ಗಾಡಿ ಸಾಹುಕಾರ, ಜಿ.ಪಂ ಸದಸ್ಯರಾದ ಶಿವರಾಜ ಪಾಟೀಲ ರದ್ದೆವಾಡಗಿ, ಅರುಣಕುಮಾರಗೌಡ ಪಾಟೀಲ, ದಿಲೀಪ ಪಾಟೀಲ, ಶಿವಶರಣಪ್ಪ ಹೀರಾಪುರ, ರತ್ನವ್ವಾ ಭೀರಣ್ಣಾ ಆರ್ ಕಲ್ಲೂರ, ಮಾಜಿ ಜಿ.ಪಂ. ಸದಸ್ಯರಾದ ಸಿದ್ದರಾಮ ಪಾಟೀಲ, ಪ್ರಕಾಶ ಜಮಾದಾರ, ಮತೀನ ಪಟೇಲ, ಸಿದ್ಧಾರ್ಥ ಬಸರಿಗಿಡದ, ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನಕೇರಿ, ಸಣ್ಣ ನೀರಾವರಿಯ ಮುಖ್ಯ ಎಂಜನೀಯರ್ ಜಿ.ಟಿ.ಸುರೇಶ, ಅಧೀಕ್ಷಿಕ ಎಂಜನೀಯರ್ ಸುರೇಶ ಎಸ್ ಶರ್ಮಾ, ಕಾರ್ಯನಿರ್ವಾಹಕ ಎಂಜನೀಯರ್ ಅಶೋಕ ಅಂಬಲಗಿ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಶಾಂತಪ್ಪ ಎಸ್.ಜಾಧವ್ ಸೇರಿದಂತೆ ಮತ್ತಿತರರು ಇದ್ದರು.
ಕರಜಗಿ ಪ್ರೌಢಶಾಲೆ ಶಿಕ್ಷಕ ಆನಂದ ಕುಂಬಾರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.