ರಾಜ್ಯ ಸರಕಾರದಿಂದ ದಲಿತರಿಗೆ ಅನ್ಯಾಯ: ಡಾ ಅಂಬಾರಾಯ ಅಷ್ಠಗಿ ಟೀಕೆ

ಕಲಬುರಗಿ :ಆ.1: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ದಲಿತರಿಗೆ ವಂಚನೆ ಮಾಡುವ ಸರಕಾರ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಅವರು ಸರ್ಕಾರದ ನಡಾವಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂಪಾಯಿಯನ್ನು ಬಳಸುತ್ತಿರುವುದಾಗಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದು ದಲಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರು ಮತ್ತು ಸಮಾಜ ಕಲ್ಯಾಣ ಸಚಿವರು ಮಾಡುತ್ತಿರುವ ಮಹಾಮೋಸ ಎಂದು ಅವರು ಟೀಕಿಸಿದ್ದಾರೆ.

ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಅದರ ವಿರುದ್ಧ ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರಕಾರವು 2014ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗಾಗಿ ವಿಶೇಷ ಯೋಜನೆಯನ್ನು ಚಾಲ್ತಿಗೆ ತಂದಿತ್ತು.
ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದರು.

ಇಡೀ ದಲಿತ ಸಮುದಾಯವು ಕಾಂಗ್ರೆಸ್ ಸರಕಾರವು ಒಂದು ಉತ್ತಮ ಯೋಜನೆಯನ್ನು ಕೊಟ್ಟಿದೆ ಎಂದು ಖುಷಿ ಪಟ್ಟಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿಯೂ ಕೂಡ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಲಿತರ ಹೆಸರಿನಲ್ಲಿ ಅವರ ಅಭಿವೃದ್ಧಿಗೆ 26 ಸಾವಿರ ಕೋಟಿ ರೂಪಾಯಿಯನ್ನು ನೀಡಿದ್ದೇನೆ ಎಂದು ಹೇಳಿ ಅದರ ಅಡಿಯಲ್ಲಿ 7 ಡಿ ಕಾನೂನನ್ನೂ ಜೊತೆಯಲ್ಲೇ ಜಾರಿ ಮಾಡಿದ್ದರು.
ಈ ಹಣ ಖರ್ಚಾಗದಿದ್ದರೆ ಬೇರೆ ಇಲಾಖೆಗಳಿಗೆ ಖರ್ಚು ಮಾಡಬಹುದೆಂಬ ಅವಕಾಶವನ್ನು ಇದು ನೀಡಿತ್ತು ಎಂದು ಡಾ.ಅಷ್ಠಗಿ ತಿಳಿಸಿದ್ದಾರೆ ಸಿದ್ದಾರೆ.
ದಲಿತರಿಗೆ ಪ್ರಸ್ತುತ ಕಾಂಗ್ರೆಸ್ ಸರಕಾರವು ಅತಿ ಹೆಚ್ಚು ಹಣ ನೀಡಿ, ತೆರಿಗೆ ಹಣವನ್ನು ದಲಿತರಿಗೆ ಖರ್ಚು ಮಾಡುತ್ತಿದೆ ಎಂಬಂತೆ ಬೇರೆ ಬೇರೆ ಜಾತಿಯ ಸಾಮಾನ್ಯ ಜನರು ದಲಿತರ ಕುರಿತು ಸಿಟ್ಟಾಗುವಂತೆ ನಡೆದುಕೊಂಡಿತ್ತು.
ಆದರೆ, ಸಿದ್ದರಾಮಯ್ಯನವರು ಮೆಟ್ರೊ, ಕೆರೆಗಳ ಹೂಳೆತ್ತಲು ಮತ್ತು ರಸ್ತೆ ಅಭಿವೃದ್ಧಿಗೆ ಪಿಡಬ್ಲ್ಯೂಡಿಗೆ ಸುಮಾರು 19 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ಹಣವನ್ನು ಕೊಟ್ಟಿದ್ದರು.
ಈ ಮೂಲಕ ದಲಿತರಿಗೆ ಸಿದ್ದರಾಮಯ್ಯರ ಸರಕಾರ ವಂಚನೆ ಮಾಡಿತ್ತು ಎಂದು ಅವರು ನೆನಪಿಸಿದ್ದಾರೆ.
ಆ ನಂತರ ಬಿಜೆಪಿ ಸರಕಾರವನ್ನು ಕೂಡ ಅವರು ಹಲವು ಸಂದರ್ಭದಲ್ಲಿ ‘ದಲಿತರಿಗೆ ನಾನು ವಿಶೇಷ ಯೋಜನೆ ಕೊಟ್ಟು ಬಹಳ ಸಹಾಯ ಮಾಡಿದ್ದೇನೆ. ಆದರೆ, ಬಿಜೆಪಿ ಅವರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ’ ಎಂದು ಆಪಾದನೆಯನ್ನೂ ಮಾಡುತ್ತಿದ್ದರು.
ನಮ್ಮ ಬಿಜೆಪಿ ಸರ್ಕಾರ ಕಾನೂನುಬದ್ಧವಾಗಿ ಕೊಡಬಹುದಾದ ಎಲ್ಲ ಹಣವನ್ನು ದಲಿತರಿಗೆ ಸರಿಯಾಗಿ ನೀಡಿತ್ತು. ಅದು ದಲಿತರಿಗೇ ಸೇರುವಂತೆ ನೋಡಿಕೊಂಡಿತ್ತು ಎಂದು ವಿವರಿಸಿದ್ದಾರೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಳೆದ ಬಜೆಟ್‍ನಲ್ಲಿ 30 ಸಾವಿರ ಕೋಟಿ ಮೊತ್ತವನ್ನು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಗೆ ಮೀಸಲಿಟ್ಟಿದ್ದರು.
ಇದನ್ನು ಕೂಡ ಟ್ವೀಟ್ ಮಾಡಿ ಸಿದ್ದರಾಮಯ್ಯನವರು ಅಣುಕಿಸಿದ್ದರು.
ಕೇವಲ 30 ಸಾವಿರ ಕೋಟಿ ನೀಡಿದ್ದಾರೆ. ಅವರಿಗೆ ಶೇ 24.5 ಹಣ ಮೀಸಲಿಟ್ಟರೆ 45 ಸಾವಿರ ಕೋಟಿ ಕೊಡಬೇಕಿತ್ತು. ಇವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಆದರೆ, ಈಗ ಅವರೇ ಬಜೆಟ್ ಮಂಡಿಸಿದಾಗ ನಾವು ನೀಡಿದ 30 ಸಾವಿರ ಕೋಟಿ ಬದಲಾಗಿ 34 ಸಾವಿರ ಕೋಟಿ ನೀಡಿದ್ದಾರೆ. ನಾವು ನಮ್ಮ ಬಜೆಟ್‍ನಡಿ ದಲಿತರ ಹಣ ಅವರ ಅಭಿವೃದ್ಧಿಗಾಗಿಯೇ ಮೀಸಲಾಗಬೇಕೆಂಬ ದೃಷ್ಟಿಯಿಂದ ಬೊಮ್ಮಾಯಿಯವರ 7 (ಡಿ) ರದ್ದು ಮಾಡುವುದಾಗಿ ಪ್ರಕಟಿಸಿದ್ದರು ಎಂದು ತಿಳಿಸಿದ್ದಾರೆ.
ಇದನ್ನು ಕಂಡ ಸಿದ್ದರಾಮಯ್ಯನವರು ತಾವು ಕೂಡ 7 (ಡಿ) ರದ್ದು ಮಾಡುವುದಾಗಿ ತಿಳಿಸಿದ್ದರು. ಆದರೆ, ಅವರು 24.5 ಹಣ ಮೀಸಲಿಟ್ಟಿರಲಿಲ್ಲ. ಕೇವಲ 4 ಸಾವಿರ ಕೋಟಿ ಹೆಚ್ಚಿಸಿದ್ದರು. ಈಗ 7 (ಡಿ) ಯನ್ನು ಹಾಗೇ ಇಟ್ಟು 11 ಸಾವಿರ ಕೋಟಿಯನ್ನು ಮತ್ತೆ ಗ್ಯಾರಂಟಿಗಳಿಗಾಗಿ ತೆಗೆಯಲಾಗಿದೆ.
ಇದು ದಲಿತರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ಮಾಡಿದ ಮಹಾಮೋಸ ಎಂದು ಕಟುವಾಗಿ ಟೀಕಿಸಿದ್ದಾರೆ.
ಕಳೆದ ವಾರವೇ ಇದನ್ನು ನಮ್ಮ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದರು.
ಆಗ ಸರಕಾರವು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇವತ್ತು ಸಚಿವ ಮಹದೇವಪ್ಪ ಅವರು ಅದರ ಕುರಿತು ಮಾಹಿತಿ ನೀಡಿದ್ದಾರೆ.
ಗ್ಯಾರಂಟಿಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ಹಣವನ್ನು ಸರಕಾರ ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಕೂಡದು ಎಂದು ಡಾ ಅಷ್ಠಗಿ ಆಗ್ರಹಿಸಿದ್ದಾರೆ.
ಈ ಹಣವನ್ನು ದಲಿತರ ಅಭಿವೃದ್ಧಿ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರಿಗೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಹೋರಾಟ ಮಾಡಲಿದೆ ಎಂದು ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.