ರಾಜ್ಯ ಸಮ್ಮೇಳನಕ್ಕೆ ಜಿಲ್ಲೆಯ 3 ಸಾವಿರ ನೌಕರರು

ಬೀದರ್:ಫೆ.26: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ. 27 ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಹಾ ಸಮ್ಮೇಳನದಲ್ಲಿ ಜಿಲ್ಲೆಯ ಮೂರು ಸಾವಿರ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ನೌಕರರ ಇತರ ಸಂಘಗಳ ಮುಂದಾಳತ್ವದಲ್ಲಿ ನೌಕರರು ರೈಲು, ಬಸ್, ಸ್ವಂತ ವಾಹನ ಹಾಗೂ ಖಾಸಗಿ ವಾಹನಗಳಲ್ಲಿ ಸೋಮವಾರ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
ಸಂಘದ ನಾಯಕತ್ವದಲ್ಲಿ ಬೀದರನಿಂದ 880, ಭಾಲ್ಕಿ 250, ಹುಮನಾಬಾದ್ 210, ಬಸವಕಲ್ಯಾಣ 275, ಔರಾದ್ 180, ಚಿಟಗುಪ್ಪ 175, ಕಮಲನಗರ 140 ಹಾಗೂ ಹುಲಸೂರಿನಿಂದ 125 ನೌಕರರು ಪಯಣ ಬೆಳೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಬೀದರ್ ತಂಡದ ನೇತೃತ್ವವನ್ನು ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ ಹಾಗೂ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಚಪ್ಪ ಪಾಟೀಲ, ನಾಗಶೆಟ್ಟಿ ಡುಮಣಿ, ಮಲ್ಲಿಕಾರ್ಜುನ ಮೇತ್ರೆ, ರಾಜಕುಮಾರ ಉದಗಿರೆ, ರಾಜಕುಮಾರ ಬೇಲೂರೆ, ಲಿಂಗಾನಂದ ಮಹಾಜನ್, ಭೀಮಾಶಂಕರ ಆದೆಪ್ಪ ಆಯಾ ತಾಲ್ಲೂಕುಗಳ ತಂಡಗಳ ನೇತೃತ್ವ ವಹಿಸಲಿದ್ದಾರೆ. ಉಳಿದ ನೌಕರರು ನೌಕರರ ವಿವಿಧ ಸಂಘಗಳ ಮುಂದಾಳತ್ವದಲ್ಲಿ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ರಾಜ್ಯ ಪರಿಷತ್ ಸದಸ್ಯರು, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಗಳಿಗೆ ಸಮ್ಮೇಳನದಲ್ಲಿ ಮುಂದಿನ ಆಸನಗಳ ಪಾಸ್ ಸಿಗಲಿದೆ. ನೌಕರರಿಗೆ ಉಪಾಹಾರ, ಚಹಾ, ಊಟ ಹಾಗೂ ವಸತಿ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನೌಕರರಿಗೆ ಫೆ. 27 ಮತ್ತು 28 ರಂದು ಒಒಡಿ ಸೌಲಭ್ಯ ಇರಲಿದೆ. ಏಳನೇ ವೇತನ ಆಯೋಗದ ಶಿಫಾರಸು, ಹಳೆ ಪಿಂಚಣಿ ಯೋಜನೆ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಮೊದಲಾದವು ಸಮ್ಮೇಳನದ ಬೇಡಿಕೆಗಳಲ್ಲಿ ಸೇರಿವೆ ಎಂದು ಹೇಳಿದ್ದಾರೆ.