ರಾಜ್ಯ ಸಚಿವ ಸಂಪುಟದಲ್ಲಿ ಲಂಬಾಣಿ ಸಮಾಜಕ್ಕೆ ಪ್ರಾತಿನಿಧ್ಯ ಕೊಡಲು ಚವ್ಹಾಣ್ ಒತ್ತಾಯ

ಕಲಬುರಗಿ.ಮೇ.29: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿನ ರಾಜ್ಯ ಸಚಿವ ಸಂಪುಟದಲ್ಲಿ ಕೂಡಲೇ ಲಂಬಾಣಿ ಸಮಾಜಕ್ಕೆ ಪ್ರಾತಿನಿಧ್ಯ ಕೊಡಬೇಕು ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಸಚಿವರೂ ಆದ ಹಿರಿಯ ಕಾಂಗ್ರೆಸ್ ಮುಖಂಡ ಬಾಬುರಾವ್ ಚವ್ಹಾಣ್ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಲಂಬಾಣಿ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹಠಾವೋ ತಾಂಡಾ ಬಚಾವೋ ಎಂಬ ಕೂಗಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 90ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲಂಬಾಣಿ ಸಮಾಜದವರು ಚಲಾಯಿಸಿದರು. ಇದರಿಂದ 136 ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲುವಂತಾಗಿದೆ ಎಂದು ಅವರು ಹೇಳಿದರು.
ಕಾಂಗ್ರಸ್ ಪಕ್ಷದ ವರಿಷ್ಠರು ಇದರನ್ನು ಗಮನದಲ್ಲಿ ಇಟ್ಟುಕೊಳ್ಳಲಾರದೇ ಲಂಬಾಣಿ ಸಮಾಜಕ್ಕೆ ಒಂದು ಸಚಿವ ಸ್ಥಾನವನ್ನೂ ಕೊಡಲಿಲ್ಲ ಎಂದು ಆಕ್ರೋಶ ಹೊರಹಾಕಿದ ಅವರು, ಇದರಿಂದ ಲಂಬಾಣಿ ಸಮಾಜಕ್ಕೆ ದ್ರೋಹ ಮತ್ತು ಮೋಸ ಮಾಡಿದಂತಾಗಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ಇಡೀ ಬಂಜಾರಾ ಸಮಾಜವು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಿಂತಿದೆ ಎಂದು ಕಿಡಿಕಾರಿದರು.
ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿದ ಬಿಜೆಪಿ ಸರ್ಕಾರವು ತಪ್ಪು ಮಾಡಿದ ಕಾರಣದಿಂದ ಲಂಬಾಣಿ ಸಮಾಜದ ಸಂಪೂರ್ಣ ಮತವನ್ನು ಕಾಂಗ್ರೆಸ್ಸಿಗೆ ಮಾಡಲಾಯಿತು. ಮುಗ್ದ ಬಂಜಾರಾ ಸಮಾಜವನ್ನು ಕಾಂಗ್ರೆಸ್ ಕೂಡ ಮೋಸ ಮಾಡುತ್ತಿದೆ ಎಂದು ಅವರು ಹರಿಹಾಯ್ದರು.
ಜಿಲ್ಲೆಯಲ್ಲಿ ಲಂಬಾಣಿ ಸಮಾಜ ಹೆಬ್ಬೆಟ್ಟು ಒತ್ತುವವರಿಗೆ ಟಿಕೆಟ್ ಬೇಡವೆಂದರೂ ಸಹ ಕಾಂಗ್ರೆಸ್ಸಿನವರು ಟಿಕೆಟ್ ಕೊಟ್ಟು ಸೋಲಿಗೆ ಕಾರಣವಾಯಿತು ಎಂದು ಗ್ರಾಮೀಣ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಹೆಸರು ಹೇಳದೇ ಚವ್ಹಾಣ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ತಕ್ಷಣವೇ ಸಂಪುಟ ದರ್ಜೆಯ ಒಂದು ಸ್ಥಾನವನ್ನು ಲಂಬಾಣಿ ಸಮುದಾಯಕ್ಕೆ ಕೊಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆಯವರಲ್ಲಿ ಅವರು ಒತ್ತಾಯಿಸಿದರು.
ಒಂದು ವೇಳೆ ತಕ್ಷಣವೇ ಸರಿಪಡಿಸದೇ ಹೋದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಂಜಾರಾ ಸಮಾಜವು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಿಲ್ಲುವ ಸೂಚನೆ ಕಂಡು ಬರುತ್ತಿದೆ ಎಂದು ಎಚ್ಚರಿಸಿದ ಅವರು, ರಾಜ್ಯ ಸರ್ಕಾರದಲ್ಲಿ ಏಕೈಕ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರಲ್ಲಿ ಒಬ್ಬರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ಕೊಡುವ ಮೂಲಕ ಸಮಾಜದ ಹಿತವನ್ನು ಕಾಪಾಡಬೇಕು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ತುಳಸಿರಾಮ್ ಪವಾರ್, ದಿಲೀಪ್ ನಾಯಕ್, ಕ್ಷತ್ರು ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.