ರಾಜ್ಯ ಸಂಪೂರ್ಣ ಸ್ತಬ್ಧ

Avenue road

ಬೆಂಗಳೂರು,ಏ.೨೫- ಕೊರೊನಾ ಹರಡುವಿಕೆಯ ವೇಗಕ್ಕೆ ಕಡಿವಾಣ ಹಾಕಲು ಜಾರಿಯಾಗಿರುವ ವಾರಾಂತ್ಯ ಕರ್ಫ್ಯೂನ ೨ನೇ ದಿನವಾದ ಇಂದು ರಾಜ್ಯ ಸಂಪೂರ್ಣ ಸ್ಥಬ್ದಗೊಂಡಿದೆ.
ವಾರಾಂತ್ಯ ಕರ್ಫ್ಯೂಗೆ ಮೊದಲ ದಿನವಾದ ನಿನ್ನೆ ರಾಜ್ಯಾದ್ಯಂತ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ೨ನೇ ದಿನವಾದ ಇಂದೂ ಸಹ ರಾಜಧಾನಿ ಬೆಂಗಳೂರು ಸೇರಿದಂತೆ ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಗಳು ವಿರಳವಾಗಿದೆ. ಸಾರಿಗೆ ಸಂಸ್ಥೆಯ ಬಸ್ ಸೇರಿದಂತೆ ಬಹುತೇಕ ಸಾರ್ವಜನಿಕ ಸಾರಿಗೆಯು ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣಗಳು, ರಸ್ತೆಗಳು ಬಿಕೋ ಎನ್ನುತ್ತಿವೆ.
ಈ ಹಿಂದೆ ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಲಾಗಿದ್ದ ಲಾಕ್‌ಡೌನ್ ವಾರಾಂತ್ಯ ಕರ್ಫ್ಯೂನಲ್ಲಿ ಮರುಸೃಷ್ಟಿಯಾಗಿದೆ. ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವವರಿಗೂ ನಿರ್ಬಂಧ ಹೇರಲಾಗಿದೆ. ಸುಖಾಸುಮ್ಮನೆ ರಸ್ತೆಗಿಳಿಯುವವರಿಗೆ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಹಲವು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊದಲ ದಿನದಂತೆ ಇಂದೂ ಸಹ ಬೆಳಿಗ್ಗೆ ೬ ರಿಂದ ೧೦ರವರೆಗೆ ಅವಶ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಅವಧಿಯಲ್ಲಿ ಅವಶ್ಯ ವಸ್ತುಗಳ ಖರೀದಿಗೆ ಜನ ಮುಗಿ ಬಿದ್ದಿದ್ದು ಎಲ್ಲೆಡೆ ಸಾಮಾನ್ಯವಾಗಿತ್ತು. ಅದರಲ್ಲೂ ಮಾಂಸ ಖರೀದಿಗೆ ದಟ್ಟಣೆ ಹೆಚ್ಚಿತ್ತು.
ಬೆಳಿಗ್ಗೆ ೧೦ರ ನಂತರ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆದವು. ರಸ್ತೆಗಳಲ್ಲು ವಾಹನಗಳ ಓಡಾಟ ಸ್ಥಗಿತಗೊಂಡಿತ್ತು. ಒಂದು ರೀತಿಯಲಿ ಅಘೋಷಿತ ಬಂದ್ ವಾತಾವರಣ ಎಲ್ಲೆಡೆ ಇತ್ತು.
ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಬಸ್‌ಗಳನ್ನು ಓಡಿಸಲು ಸಾರಿಗೆ ಸಂಸ್ಥೆ ತೀರ್ಮಾನಿಸಿತ್ತಾದರೂ ಜನರಿಲ್ಲದೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ನಿಲ್ದಾಣದಲ್ಲೇ ನಿಂತಿದ್ದವು. ಮೆಟ್ರೋ ರೈಲು ಸಂಚಾರ ನಿನ್ನೆಯಿಂದಲೇ ಬಂದ್ ಆಗಿದೆ. ಆಟೋ, ಟ್ಯಾಕ್ಸಿಗಳ ಸಂಚಾರವೂ ಅತ್ಯಂತ ವಿರಳವಾಗಿದ್ದು, ಅಲ್ಲೊಂದು ಇಲ್ಲೊಂದು ಓಡಾಟ ನಡೆಸಿವೆ,
ರಸ್ತೆಗಳಲ್ಲಿ ವಾಹನ, ಜನರಿಲ್ಲದೆ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಒಂದು ರೀತಿ ಇಡೀ ರಾಜ್ಯದ ಜನಜೀವನ ಸ್ಥಬ್ದಗೊಂಡಿದೆ.

೨ನೇ ದಿನವೂ ಮುಂದುವರೆದ ವಾರಾಂತ್ಯ ಕರ್ಫ್ಯೂ. ಜನಜೀವನ ಸ್ಥಬ್ದ.
ಬಸ್ ಸೇರಿದಂತೆ ವಾಹನಗಳ ಸಂಚಾರ ಬಹುತೇಕ ಸ್ತಬ್ಧ.
ಅಂಗಡಿ-ಮುಂಗಟ್ಟುಗಳು ಬಂದ್.
ಜನರ ಓಡಾಟಕ್ಕೂ ಬ್ರೇಕ್.
ಮೆಟ್ರೊ ರೈಲು ಸಂಪೂರ್ಣ ಬಂದ್.