ರಾಜ್ಯ ವಿಧಾನ ಪರಿಷತ್ ಚುನಾವಣೆ: ಜಗದೇವ್ ಗುತ್ತೇದಾರ್ ನಾಮಪತ್ರ ಸಲ್ಲಿಕೆ

ಕಲಬುರಗಿ:ಜೂ.3: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಜೂನ್ 13ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಿಲ್ಲಾ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಸೋಮವಾರ ಬೆಂಗಳೂರಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಗುತ್ತೇದಾರ್ ಅವರ ನಾಮಪತ್ರಕ್ಕೆ ಸೂಚಕರಾಗಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ಡಾ. ಅಜಯ್ ಸಿಂಗ್ ಸೂಚಕರಾಗಿದ್ದರು. ಇದಲ್ಲದೆ ಜಗದೇವ್ ಗುತ್ತೇದಾರ್ ಅವರ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಹಾಜರಿದ್ದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಡಾ. ಅಜಯಸಿಂಗ್ ಅವರು ಮಾತನಾಡಿ, ಟಿಕೆಟ್ ಪಡೆದಿರುವ ಪಕ್ಷದ ಎಲ್ಲ 8 ಅಭ್ಯರ್ಥಿಗಳಿಗೆ ಅಭಿನಂದಿಸಿದರು. ಈ ಬಾರಿ ಕಲಬುರ್ಗಿಯ ಜಗದೇವ್ ಗುತ್ತೇದಾರ್ ಹಾಗೂ ರಾಯಚೂರಿನ ಎನ್.ಎಸ್. ಬೋಸರಾಜು, ಎ. ವಸಂತಕುಮಾರ್, ಬಸನಗೌಡ ಬಾದರ್ಲಿ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ವರಿಷ್ಠರು ಕಲ್ಯಾಣ ಕರ್ನಾಟಕಕ್ಕೆ ಸಿಂಹಪಾಲು ಪ್ರಾತಿನಿಧ್ಯ ನೀಡಿದೆ, ಕಲ್ಯಾಣ ಕರ್ನಾಟಕದ ಪ್ರದೇಶ ಸದಾಕಾಲ ಕಾಂಗ್ರೆಸ್ನ ಭದ್ರಕೋಟೆ. ಹೀಗಾಗಿ ಈ ಬಾಗದಲ್ಲಿ ಪಕ್ಷವನ್ನು ಇನ್ನೂ ಗಟ್ಟಿಗೊಳಿಸುವಲ್ಲಿ ವರಿಷ್ಠರು ಈ ನಿಲುವು ಹೆಚ್ಚು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ನಾಯಕರೆಲ್ಲರೂ ಸೇರಿಕೊಂಡು ಕೈಗೊಂಡಿರುವ ಈ ನಿರ್ಣಯ ಬರುವ ದಿನಗಳಲ್ಲಿ ಕಲ್ಯಾಣ ನಾಡಿನ ಎಲ್ಲ 7 ಜಿಲ್ಲೆಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಹೆಚ್ಚು ಬಲಗೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಜಗದೇವ್ ಗುತ್ತೇದಾರ್ ಅವರು ಸಾಕಷ್ಟು ಕೊಡುಗೆ ನೀಡಿದ್ದು ಪಕ್ಷದ ಮುಖಂಡರು ಅದನ್ನೆಲ್ಲ ಗಮನಿಸಿಯೇ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯತ್ವಕ್ಕೆ ಅವಕಾಶ ನೀಡಿದ್ದಾರೆಂದು ಹೇಳುವ ಮೂಲಕ ಡಾ. ಅಜಯ್‍ಸಿಂಗ್ ಅವರು ಜಗದೇವ್ ಗುತ್ತೇದಾರ್ ಅವರಿಗೆ ಶುಭ ಕೋರಿದರು. ಇನ್ನು ಪಕ್ಷದ ಅಭ್ಯರ್ಥಿಗಳಾದ ಡಾ. ಯತೀಂದ್ರ ಸಿದ್ಧರಾಮಯ್ಯ, ಬಿಲ್ಕಿಸ್ ಬಾನೋ, ಐವಾನ್ ಡಿಸೋಜಾ ಹಾಗೂ ಕೆ. ಗೋವಿಂದರಾಜು ಅವರಿಗೂ ಸಹ ಡಾ. ಅಜಯ್‍ಸಿಂಗ್ ಶುಭ ಕೋರಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಹರ್ಷ: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್ 13ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ್ ಗುತ್ತೇದಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರೋದಕ್ಕೆ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಜಗದೇವ್ ಗುತ್ತೇದಾರ್ ಅವರು ಪಕ್ಷಕ್ಕಾಗಿ ಸಲ್ಲಿಸಿದ ನಿಸ್ವಾರ್ಥ,ಅವಿರತ ಸೇವೆಯ ಪ್ರತಿಫಲ ಇದಾಗಿದೆ. ಪಕ್ಷ ನಿಷ್ಠೆಗೆ ದೊರಕಿದ ಉತ್ತಮ ಫಲ ಇದು. ಇದಲ್ಲದೆ ವಿಧಾನ ಪರಿಷತ್‍ಗೆ ಜಗದೇವ್ ಗುತ್ತೇದಾರ್ ಅವರು ಪ್ರವೇಶ ಪಡೆದು ನಮ್ಮ ಭಾಗದ ಜನಪರ ಧ್ವನಿಯಾಗಿ ಹೊರಹೊಮ್ಮಲಿ ಎಂದು ಅವರು ಹೇಳಿಕೆಯಲ್ಲಿ ಶುಭ ಹಾರೈಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಜಗದೇವ್ ಗುತ್ತೇದಾರ ಅವರನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದ್ದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದಗಳನ್ನು ಅಲ್ಲಮಪ್ರಭು ಪಾಟೀಲ್ ಅವರು ಸಲ್ಲಿಸಿದ್ದಾರೆ.
ಪರಿಚಯ: ಜಗದೇವ್ ಗುತ್ತೇದಾರ್ ಕಾಳಗಿ ಅವರು ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಈಡಿಗಾ (2ಎ)ಕ್ಕೆ ಸೇರಿರುವ ಗುತ್ತೇದಾರ್ ಅವರು ಮೂಲತ: ಕಾಳಗಿ ತಾಲ್ಲೂಕಿನ ಕಾಳಗಿ ನಿವಾಸಿಯಾದರೂ ಸಹ ಹಾಲಿಯಾಗಿ ನಗರದ ಬ್ರಹ್ಮಪೂರದ ಶರಣಬಸವೇಶ್ವರ್ ದೇವಸ್ಥಾನದ ಪ್ರದೇಶದ ನಿವಾಸಿಯಾಗಿದ್ದಾರೆ.
1979ರಿಂದ 1984ರವರೆಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ, 1984ರಿಂದ 1985ರವರೆಗೆ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 1987ರಿಂದ 1992ರವರೆಗೆ ಚಿತ್ತಾಪುರ ತಾಲ್ಲೂಕಿನ ಕಾಳಗಿ ಮಂಡಲ ಪಂಚಾಯಿತಿ ಸದಸ್ಯರಾಗಿ, 1992-1993ರಲ್ಲಿ ನಗರ ಆಶ್ರಯ ಸಮಿತಿ ಸದಸ್ಯರಾಗಿ, 1987ರಿಂದ 2002ರವರೆಗೆ ಕಾಳಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸುಮಾರು 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
1998ರಿಂದ 2001ರವರೆಗೆ ಬೆಂಗಳೂರಿನ ಸೆಂಟ್ರಲ್ ಸ್ಟ್ರೇಟ್ ಸೀಡ್ಸ್ ಸಬ್ ಕಮೀಟಿ ಸದಸ್ಯರಾಗಿ, 2000ರಿಂದ 2004ವರೆಗೆ ಕಾಳಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, 2001-2003ರವರೆಗೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, 2005ರಿಂದ 2010ರವರೆಗೆ ಕೆಪಿಸಿಸಿ ಸದಸ್ಯರಾಗಿ, 2005ರಿಂದ 2012ರವರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ, 2010ರಿಂದ 2013ರವರೆಗೆ ಕೇಂದ್ರ ಸರ್ಕಾರದ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೆಷನಲ್ ಟ್ರೇನಿಂಗ್ ಸದಸ್ಯರಾಗಿ, 2019ರಿಂದ ಕಾಮರಾಜ್ ನಾಡರ್ ಕೋ ಅಪರೇಟಿವ್ ಕಲಬುರ್ಗಿಯ ಅಧ್ಯಕ್ಷರಾಗಿ, ಕಳೆದ 2017ರ ಅಕ್ಟೋಬರ್ 23ರಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಪಕ್ಷದ ನಿಷ್ಠಾವಂತ ಜಗದೇವ್ ಗುತ್ತೇದಾರ್ ಅವರಿಗೆ ರಾಜ್ಯ ವಿಧಾನಸಭೆಯಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.