ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ: ಮೇ 10ಕ್ಕೆ ಮತದಾನ, ಮೇ 13ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ: ಗುರುಕರ್

ಕಲಬುರಗಿ,ಮಾ.29: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏಪ್ರಿಲ್ 21ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10ಕ್ಕೆ ರಾಜ್ಯದಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ ಎಂದರು.

ಕಲಬುರಗಿ ಜಿಲ್ಲೆಯಾದ್ಯಂತ 2,380 ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, 10,98,549 ಪುರುಷರು ಮತ್ತು 10,72,662 ಮಹಿಳೆಯರು ಸೇರಿ 21,71,211 ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ, ಹಿರಿಯರು ಮತ್ತು ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮತದಾನ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಅಥವಾ ಬುರ್ಖಾ ಧರಿಸುವಂತಿಲ್ಲ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಸ್ಪಷ್ಟನೆ ನೀಡಿದರು.

ಮಾದರಿ ನೀತಿ ಸಂಹಿತೆ ತಕ್ಷಣದಿಂದಲೆ ಜಾರಿಯಾಗಿರುವುದರಿಂದ ರಾಜಕೀಯ ಸಭೆ, ಸಮಾರಂಭಕ್ಕೆ ಪರವಾನಿಗೆ ಕಡ್ಡಾಯವಾಗಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಡೆಯುವ ಜಯಂತಿಗಳು ಪೂಜೆಗೆ ಸೀಮಿತವಾಗಿ ಸರಳಾಚರಣೆ ಮಾಡಲಾಗುತ್ತದೆ. ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸರ್ಕಾರದಿಂದ ನೀಡಲಾದ ಎಲ್ಲಾ ಸೌಲಭ್ಯಗಳನ್ನು ವಾಪಸ್ ಪಡೆಯಲಾಗುತ್ತದೆ. ಸರ್ಕಾರಿ ಅಧಿಕಾರಿಗಳು, ನೌಕರರಿಗೆ ರಜೆ ನಿರ್ಬಂಧಿಸಿದ್ದು, ಕೇಂದ್ರಸ್ಥಾನ ಬಿಡುವಂತಿಲ್ಲ. ಜಿಲ್ಲೆಯಿಂದ ವರ್ಗಾವಣೆ ಮಾಡುವಂತಿಲ್ಲ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸಭೆ ಮಾಡುವಂತಿಲ್ಲ. ಅತಿಥಿಗೃಹಗಳು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಗ್ರಹಣದಲ್ಲಿರುವುದರಿಂದ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಸಾರ್ವಜನಿಕರಿಗೆ ಪ್ರವಾಸಿ ಮಂದಿರದಲ್ಲಿ ನಿಷೇಧಿಸಲಾಗಿದೆ ಎಂದರು.

ಚುನಾವಣೆ ಮುಕ್ತ ಮತ್ತ ನ್ಯಾಯಸಮ್ಮತವಾಗಿ ನಡೆಯಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

2023ರ ಚುನಾವಣೆ ವಿಶೇಷ:

80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತವರಿಗೆ ಮನೆಯಿಂದಲೇ ಮತದಾನ ಮಾಡಲು ಈ ಬಾರಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಶೇ.50ರಷ್ಟು ಮತಗಟ್ಟೆಯಲ್ಲಿ ಸಿ.ಸಿ.ಟಿ.ವಿ. ಕಣ್ಗಾವಲು ಇರಲಿದೆ. ಮಹಿಳಾ ಸ್ನೇಹಿಯಾಗಿ 40 ಸಖಿ ಪಿಂಕ್ ಬೂತ್ ಇರಲಿವೆ. ಇದಲ್ಲದೆ ವಿಲಚೇತನರೇ ಕಾರ್ಯನಿರ್ವಹಿಸುವ 9 ಮತಗಟ್ಟೆಗಳು ಮತ್ತು 20ರ ಆಸುಪಾಸು ಯುವಕ-ಯುವತಿ ಸಿಬ್ಬಂದಿಯಿಂದ ಕೂಡಿದ 9 ಮತಗಟ್ಟೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.

40 ಲಕ್ಷ ಖರ್ಚು ಮಿತಿ:

ವಿಧಾನಸಭಾ ಕ್ಷೇತ್ರದ ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂ. ಖರ್ಚಿನ ಮಿತಿ ನಿಗದಿಪಡಿಸಿದ್ದು, ಪಕ್ಷಕ್ಕೆ ಮಿತಿ ಇರುವುದಿಲ್ಲ. ಇದು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಕತಾಣಗಳ ಮೂಲಕ ಮಾಡುವ ಜಾಹೀರಾತನ್ನು ಸಹ ಒಳಗೊಂಡಿದೆ ಎಂದು ಡಿ.ಸಿ. ತಿಳಿಸಿದರು.

ಕಾಸಿಗಾಗಿ ಸುದ್ದಿ ಮೇಲೆ ನಿಗಾ:

ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿ, ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಬಾವ ಬೀರುವ ಸುದ್ದಿ ಪ್ರಕಟಣೆ, ಬಿತ್ತರಣೆ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನಿಗಾ ವಹಿಸಲು ಎಂ.ಸಿ.ಎಂ.ಸಿ. ಸಮಿತಿ ರಚಿಸಿಲಾಗಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸಎಲ್ ಸಹ ರಚಿಸಲಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ವಿವರಿಸಿದರು.

ಹೋರ್ಡಿಂಗ್ಸ್, ಬಂಟಿಂಗ್ಸ್ ತೆರವಿಗೆ ಸೂಚನೆ:

ಚುನಾವಣೆ ಘೋಷಣೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳು ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬಂಟಿಂಗ್ಸ್, ಬ್ಯಾನರ್ಸ್, ಭಿತ್ತಿಪತ್ರ, ಕಟೌಟ್ಸ್‍ಗಳನ್ನು ಕೂಡಲೆ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದೆ ಎಂದರು.

ಏಪ್ರಿಲ್ 11ರ ವರೆಗೆ ಹೆಸರು ಸೇರಿಸಲು ಅವಕಾಶ:

ಮೇ 10ಕ್ಕೆ ನಡೆಯುವ ಚುನಾವಣೆಗೆ ಏಪ್ರಿಲ್ 11ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಇನ್ನೆಲ್ಲೋ ಇದ್ದು ಕಲಬುರಗಿ ಜಿಲ್ಲೆಯಲಿಲ ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಿದ್ದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

42 ಚೆಕ್ ಪೋಸ್ಟ್ ಸ್ಥಾಪನೆ:

ಜಿಲ್ಲೆಯಾದ್ಯಂತ 42 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರ ಮತ್ತು ತೆಲಾಂಗಾಣಾ ಗಡಿಗೆ ತಲಾ 8 ಅಂತರ ರಾಜ್ಯ ಗಡಿ ಚೆಕ್ ಪೋಸ್ಟ್ ಮತ್ತು ಕಲಬುರಗಿ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 10 ಚೆಕ್ ಪೋಸ್ಟ್‍ಗಳಿವೆ. ಇದಲ್ಲದೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2017 ಸೆಕ್ಟರ್ ಅಧಿಕಾರಿಗಳು, 42 ಸ್ಟಾಟಿಕ್ ಸರ್ವೆಲೆನ್ಸ್ ತಂಡ, 44 ಫ್ಲೈಯಿಂಗ್ ಸ್ಕ್ವಾಟ್ ತಂಡ, 9 ವಿ.ಎಸ್.ಟಿ. ತಂಡ, 9 ವಿ.ವಿ.ಟಿ. ತಂಡ, 9 ಅಕೌಂಟ್ ತಂಡ ಹಾಗೂ 9 ಖರ್ಚು ವೆಚ್ಚಗಳ ತಂಡ ರಚಿಸಲಾಗಿದೆ. 425 ದುರ್ಬಲ ಮತಗಟ್ಟೆ ಎಂದು ಗುರುತಿಸಿದೆ ಎಂದು ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಇದ್ದರು.