ರಾಜ್ಯ ವಿಧಾನಸಭಾ ಚುನಾವಣೆ :ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಯೋಧ-ಪೊಲೀಸರ್ ಪಥ ಸಂಚಲನ

ವಿಜಯಪುರ:ಎ.8: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಮತ್ತು ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಮೀಸಲು ಪಡೆಯ ಯೋಧರು ಹಾಗೂ ಪೊಲೀಸರ ಆಕರ್ಷಕ ಪಥಸಂಚಲನ ವಿಜಯಪುರ ನಗರದಲ್ಲಿ ಜರುಗಿತು.
ಶುಕ್ರವಾರ ಸಂಜೆ ನಗರದ ಗಾಂಧಿವೃತ್ತದಲ್ಲಿ ಆರಂಭಗೊಂಡ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವಿಜಯಪುರ ನಗರದ ಗಾಂಧಿ ವೃತ್ತದಿಂದ ಆರಂಭಗೊಂಡ ಪಥಸಂಚಲನ ನಗರದ ಮೀನಾಕ್ಷಿ ಚೌಕ, ನೌಬಾಗ, ಹವೇಲಿ ಗಲ್ಲಿ, ಸಕಾಫರೋಜಾ, ಅಥಣಿ ಗಲ್ಲಿ, ಮುರಾಣಕೇರಿ ಕ್ರಾಸ್, ಕೆ.ಸಿ.ಮಾರ್ಕೆರ್ಟ ಮಾರ್ಗವಾಗಿ ಸಂಚರಿಸಿದ ಪಥ ಸಂಚಲನವು ಮತದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು.
ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಮಾತನಾಡಿಮ, ಜಿಲ್ಲೆಯ ಮತದಾರರು ಯಾವುದೇ ಆಮಿಷಕ್ಕೊಳಗಾಗದೇ, ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬ ಅರ್ಹ ಮತದಾರರು ನಿರ್ಭಿತಿಯಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದು, ಯಾವುದೇ ಅರ್ಹ ಮತದಾರರ ಮತದಾನದಿಂದ ವಂಚಿತವಾಗದೇ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ಕರೆ ನೀಡಿದ ಅವರು, ಜಿಲ್ಲೆಗೆ 5 ತುಕಡಿಗಳು ಬಂದಿದ್ದು, ವಿವಿಧ ಮತಕ್ಷೇತ್ರಗಳಲ್ಲಿ ಇಂದು ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.
6ನೇ ಬಟಾಲಿಯನ್ ಆಸ್ಸಾಂನ ಪೊಕ್ರಾಜಾಲ ಪಡೆಯ ಮುಖ್ಯಸ್ಥರಾದ ಅಸಿಸ್ಟಂಟ್ ಕಮಾಂಡೆಂಡ್ ಪೂರ್ಣಚಂದ್ರ ಸಿಂಗ್ ನೇತೃತ್ವದಲ್ಲಿ ಸೇನೆಯ 70 ಜನ ಯೋಧರು ಹಾಗೂ ವಿಜಯಪುರ ಜಿಲ್ಲೆಯ 100 ಜನ ಪೋಲಿಸರು ಈ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.