ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ

ಮೈಸೂರು,ಆ.2:- ಪ್ರಸಕ್ತ ಕಬ್ಬಿನ ದರ ನಿಗದಿಗಾಗಿ ಹಾಗೂ ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚ ರೈತರ ಶೋಷಣೆ ತಪ್ಪಿಸಲು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ತಾಲೂಕು ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರಾಜ್ಯ ಕಬ್ಬಿನ ದರ ನಿಗದಿ ಮಾಡದೆ ವಿಳಂಬ ಮಾಡುತ್ತಿರುವುದು ರೈತರ ಶೋಷಣೆಗೆ ದಾರಿಯಾಗಿದೆ. ಬಣ್ಣಾರಿ ಹಾಗೂ ಮಾದೇಶ್ವರ ಸಕ್ಕರೆ ಕಾರ್ಖಾನೆಯವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಳೆದ ವರ್ಷದ ಬೆಲೆಗಿಂತ ಟನ್ನಿಗೆ 350ರೂ.ಕಡಿಮೆ ಹಣವನ್ನು ರೈತರಿಗೆ ನೀಡುತ್ತಿರುವುದು ಈ ಬಗ್ಗೆ ರೈತರಿಗೆ ಕಬ್ಬು ಸರಬರಾಜು, ಪಾವತಿ ಬಿಲ್ಲನ್ನು ಸಹ ನೀಡದೆ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಕಾರಣ ಹೇಳಿ ಕಳೆದ ವರ್ಷಕ್ಕಿಂತ ಕಬ್ಬು ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚವನ್ನು ಯಾರ ಗಮನಕ್ಕೂ ತಾರದೆ ರೈತರಿಂದ ಹೆಚ್ಚುವರಿ ಹಣ ಕಡಿತ ಮಾಡುತ್ತಿದ್ದಾರೆ. ಇದು ರೈತರ ಶೋಷಣೆಯಾಗಿದೆ ಎಂದು ಆರೋಪಿಸಿದರು.
ಬ್ಯಾಂಕ್ ಗಳು ರೈತರಿಗೆ ಸಾಲವನ್ನು ಕಟ್ಟಲೆಂದು ನೋಟೀಸ್ ನೀಡಿ ಕಿರುಕುಳ ನೀಡುತ್ತಿವೆ. ಕೆಲವು ಬ್ಯಾಂಕ್ ಗಳು ನ್ಯಾಯಾಲಯದಲ್ಲಿ ದಾವೆ ದಾಖಲಿಸುತ್ತಿದ್ದಾರೆ. ಜಿಲ್ಲೆಯಲ್ಲಿ ರಸಗೊಬ್ಬರ ಸಮಸ್ಯೆ ಸೃಷ್ಟಿಯಾಗಿದೆ. ಡಿಎಪಿ ಯೂರಿಯಾಗೊಬ್ಬರ ಸಿಗುತ್ತಿಲ್ಲ. ಭತ್ತದ ನಾಟಿಗೆ ಗೊಬ್ಬರ ಬಳಸಲು ಅಂಗಡಿಗಳಲ್ಲಿ ದಾಸ್ತಾನು ಬಂದಿಲ್ಲ ಎಂದು ಹೇಳುತ್ತಿದ್ದಾರೆ.
ಬೆಳೆ ವಿಮೆ ಯೋಜನೆ ಅವೈಜ್ಞಾನಿಕವಾಗಿದ್ದು ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಒಂದು ಜಿಲ್ಲೆ ಒಂದು ಬೆಳೆ ಎಂಬ ನೀತಿಯನ್ನು ಜಾರಿ ಮಾಡಿ ರೈತರಿಗೆ ಬೆಳೆ ವಿಮೆಪರಿಹಾರ ಸಿಗದೇ ಪರದಾಡುವಂತಾಗಿದೆ. ಆದ್ದರಿಂದ ರೈತನ ಜಮೀನಿನ ಆಯಾ ವರ್ಷದ ಎಲ್ಲಾ ಬೆಳೆಯ ಮೇಲೆ ಫಸಲ್ ಭೀಮಾ ಯೋಜನೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ರೈತರು ಬಳಸುವ ಮೊಸರು, ಮಜ್ಜಿಗೆ, ಹಪ್ಪಳ, ರಸಗೊಬ್ಬರ, ಕೀಟನಾಶಕ, ನೀರಾವರಿ, ಯಂತ್ರೋಪಕರಣಗಳ ಮೇಲಿನ ಜಿಎಸ್ ಟಿಯನ್ನು ರದ್ದುಪಡಿಸಬೇಕು. ಸರ್ಕಾರ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕಿನ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ರಸ್ತೆ ತಡೆ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಉಪಾಧ್ಯಕ್ಷ ಸಾತಗಳ್ಳಿ ಬಸವರಾಜ್, ಮಹಾದೇವು ವಾಜಮಂಗಲ, ಪುಟ್ಟೇಗೌಡನಹುಂಡಿ ರಾಜು, ವರಕೋಡು ನಾಗೇಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.