
ಬೆಂಗಳೂರು, ಏ. ೧೦- ರಾಜ್ಯದ ಜನ ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿಯವರು ರಾಜ್ಯವನ್ನೆ ಮಾರಾಟಕ್ಕೆ ಇಡುವ ದಿನಗಳು ದೂರವಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿಯನ್ನು ಮುಳುಗಿಸಲು ಅಮೂಲ್‌ನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹುನ್ನಾರದ ವಿರುದ್ಧ ಕಿಡಿಕಾರಿ ನಂದಿನಿ ಖಾಸಗಿ ಸಂಸ್ಥೆಗಳ ಜತೆ ಹೋರಾಡಬೇಕು ನಿಜ. ಆದರೆ ಸಹಕಾರ ಸಂಘವಾದ ಅಮೂಲ್ ಜತೆ ಪೈಪೋಟಿಗೆ ಇಳಿಯುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ನಂದಿನಿಯ ೧೦೦ಕ್ಕೂ ಹೆಚ್ಚು ಉತ್ಪನ್ನಗಳಿವೆ. ಕಡಿಮೆ ದರದಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿದೆ. ಕೆಎಂಎಫ್ ಲಾಭದಲ್ಲಿದೆ. ಈಗ ಇದರ ಮೇಲೆ ಕೇಂದ್ರ ಸಹಕಾರ ಸಚಿವರ ಕಣ್ಣು ಬಿದ್ದಿದೆ. ಕೆಎಂಎಫ್‌ನ್ನು ತಮ್ಮ ಕೈಗೆ ತೆಗೆದುಕೊಳ್ಳು ಹೊರಟಿದ್ದಾರೆ ಎಂದು ದೂರಿದರು.
ಯಾವುದೇ ಕಾರಣಕ್ಕೂ ರಾಜ್ಯದ ರೈತರಿಗೆ ಮಾರಕವಾಗುವ ತೀರ್ಮಾನಗಳನ್ನು ನಾವು ವಿರೋಧಿಸುತ್ತೇವೆ. ಕೆಎಂಎಫ್‌ನ್ನು ಅಮೂಲ್ ಜತೆ ವಿಲೀನಗೊಳಿಸುವುದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಬಿಜೆಪಿಯವರು ವಿಮಾನ ನಿಲ್ದಾಣಗಳು, ಬಂದರುಗಳನ್ನು ಮಾರಾಟ ಮಾಡಿದ್ದಾರೆ. ಈಗ ರೈಲ್ವೆ ಲೈನ್‌ಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಹೀಗೆ ಮುಂದುವರೆದರೆ ರಾಜ್ಯವನ್ನು ಮಾರಾಟಕ್ಕೆ ಇಡುತ್ತಾರೆ. ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹೈನುಗಾರಿಕೆಯನ್ನು ನಂಬಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಕೆಎಂಎಫ್‌ಗೆ ತೊಂದರೆಯಾದರೆ ಈ ಕುಟುಂಬಗಳು ಕಷ್ಟಕ್ಕೆ ಸಿಲುಕುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಅಮೂಲ್ ಹಾಲನ್ನು ರಾಜ್ಯ ಪ್ರವೇಶಿಸಲು ಅವಕಾಶ ಕೊಡಬಾರದು ಎಂದು ಅವರು ತಿಳಿಸಿದರು.
ಸೌರವ್ ವಲ್ಲಬ್ ಹೇಳಿಕೆ
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸೌರವ್ ವಲ್ಲಬ್, ಸಿಆರ್‌ಪಿಎಫ್ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಅಮಿತ್ ಶಾ ಅವರಿಗೆ ಕನ್ನಡಿಗರ ಮೇಲೆ ದ್ವೇಷ ಏಕೆ, ಕೇಂದ್ರ ಸರ್ಕಾರದ ನೇಮಕಾತಿಗಳ ಪರೀಕ್ಷೆಗಳು ಸ್ಥಳೀಯ ಭಾಷೆಗಳಲ್ಲೆ ಬರೆಯಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.