ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಸಾರ್ವಜನಿಕ ಅಹವಾಲು ಆಲಿಕೆ:ಎರಡು ದಿನದಲ್ಲಿ 66 ಪ್ರಕರಣಗಳು ಇತ್ಯರ್ಥ:ನ್ಯಾ.ಎಲ್.ನಾರಾಯಣಸ್ವಾಮಿ

ಕಲಬುರಗಿ:ಜ.17: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪೂರ್ಣ ಪೀಠದಿಂದ ಕಳೆದೆರಡು ದಿನದಿಂದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ವಿಚಾರಣೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದ್ದು, ಕಲಬುರಗಿ ಜಿಲ್ಲೆಯ 133 ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎರಡು ದಿನದಲ್ಲಿಯೆ ಹೊಸದಾಗಿ 23 ಅರ್ಜಿ ಸಲ್ಲಿಕೆಯಾಗಿವೆ. ಬಹುತೇಕ ಪ್ರಕರಣಗಳನ್ನು ಸ್ಥಳದಲ್ಲಿಯೇ ದೂರುದಾರರ ಸಮಕ್ಷಮ ಅಧಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ ಎಂದರು.
ಮಾನವ ಹಕ್ಕುಗಳು ಎಂದರೆ ಅದು ನೈಸರ್ಗಿಕ ಹಕ್ಕು. ಇದನ್ನು ಯಾರು ಯಾವುದೇ ಸಂದರ್ಭದಲ್ಲಿ ಉಲ್ಲಂಘಿಸುವಂತಿಲ್ಲ ಎಂದು ಸಂವಿಧಾನ ಹೇಳುತ್ತದೆ. ಸುಪ್ರೀಂ ಕೋರ್ಟ್ ಹಲವಾರು ತೀರ್ಪಿನಲ್ಲಿ ಇದನ್ನು ಪುನರುಚ್ಚಿಸಿದೆ. ಮಾನನ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ರಾಜಧಾನಿ ಬೆಂಗಳೂರಿಗೆ ಸಾರ್ವಜನಿಕರು ಅಲೆಯಬಾರದು ಮತ್ತು ಆಯೋಗಕ್ಕೆ ಅಧಿಕಾರಿಗಳನ್ನು ಪದೇ ಪದೇ ಕರೆಸಿಕೊಳ್ಳಬಾರದೆಂಬ ಉದ್ದೇಶದಿಂದ ಇಂದು ಆಯೋಗವು ಜನರತ್ತ ಬಂದು ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಆಯೋಗದ ಇತಿಹಾಸದಲ್ಲಿಯೇ ಇದು ವಿಶಿಷ್ಟ ನಡೆಯಾಗಿದೆ ಎಂದರು. ಕಳೆದ 2 ತಿಂಗಳ ಹಿಂದೆಯ ನನ್ನ ನೇತೃತ್ವದಲ್ಲಿ ಆಯೋಗಕ್ಕೆ ಸದಸ್ಯರನ್ನಾಗಿ ಸರ್ಕಾರ ನೇಮಿಸಿದ್ದು, ಕಲಬುರಗಿಯೆ ನಮ್ಮ ಮೊದಲ ಪ್ರವಾಸವಾಗಿದೆ ಎಂದರು.
ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕೆಲವμÉ್ಟ ಬೆಳಕಿಗೆ ಬರುತ್ತಿವೆ. ಬೆಳಕಿಗೆ ಬಾರದ ಅನೇಕ ಪ್ರಕರಣಗಳಿವೆ. ಇತ್ತೀಚೆಗೆ ಶಾಲಾ ಮಕ್ಕಳು ಶೌಚಾಲಯ ಸ್ವಚ್ಛ ಮಾಡುತ್ತಿರುವುದು ಪತ್ರಿಕೆಯಲ್ಲಿ ಕಂಡು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪತ್ರಿಕೆಯಲ್ಲಿ ವರದಿ ಮುನ್ನ ಅಧಿಕಾರಿಗೆ ಇದರ ಮಾಹಿತಿ ಇರಲ್ವಾ ಅಥವಾ ಸಂವಹನದ ಕೊರತೆನಾ ಎಂದ ನ್ಯಾ. ಎಲ್. ನಾರಾಯಣಸ್ವಾಮಿ ಅವರು ತಮ್ಮ ನೆರೆ ಹೊರೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ನಡೆದಿದ್ದಲ್ಲಿ ಆಯೋಗಕ್ಕೆ ದೂರು ನೀಡಲು ಸಾರ್ವಜನಿಕರನ್ನು ಅಧಿಕಾರಿಗಳು ಪ್ರರೇಪಿಸಬೇಕು. ಗೊತ್ತಿದು ಗೊತ್ತಿಲ್ಲದ್ದಂತೆ ಇರುವುದು ತಪ್ಪೆ ಎಂದಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ಆಯೋಗದ ನಿರ್ದೇಶನ, ಶಿಫಾರಸ್ಸುಗಳನ್ನು ಅಧಿಕಾರಿಗಳು ಪ್ರಥಮಾದ್ಯತೆ ಮೇಲೆ ವಿಲೇವಾರಿ ಮಾಡಬೇಕು ಎಂದರು.
ಜೈಲಿನಲ್ಲಿ ರಾತ್ರಿ ಊಟ ಇಲ್ಲ, ಸ್ವಯಂ ಪ್ರಕರಣ ದಾಖಲು: ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ನಿನ್ನೆ ಭೇಟಿ ನೀಡಲಾಯಿತು. ಅಲ್ಲಿ ಕೈದಿಗಳಿಗೆ ಸಂಜೆ 4.30 ಗಂಟೆಗೆ ಊಟ ನೀಡುತ್ತಿದ್ದು, ರಾತ್ರಿ ಊಟ ನೀಡುತ್ತಿಲ್ಲ. ಮರು ದಿನ ಬೆಳಿಗ್ಗೆ 9 ಗಂಟೆಗೆ ಊಟ ನೀಡಲಾಗುತ್ತದೆ. ರಾತ್ರಿ ಊಟ ನೀಡದಿದ್ದರೆ ಹೇಗೆ? ಇದು ಮಾನವ ಹಕ್ಕು ಉಲ್ಲಂಘನೆ ಅಲ್ವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಈ ಕುರಿತು ಆಯೋಗ ಸ್ವಯಂ ದೂರು ದಾಖಲು ಮಾಡಿಕೊಂಡಿದೆ. ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊಳಿಸಿ ವರದಿ ಪಡೆದು ಎಲ್ಲಾ ಜೈಲಿಗೆ ಅನ್ವಯವಾಗುವಂತೆ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ಇದಲ್ಲದೆ ಜೈಲಿನ ಸಿ.ಸಿ.ಟಿ.ವಿ ಅವಲೋಕಿಸಿದಾಗ ಹೊರಗಡೆಯಿಂದ ಜೈಲಿಗೆ ಗಾಂಜಾ ಬಿಸಾಕುತ್ತಿರುವುದನ್ನು ಗಮನಿಸಿದೆ. ಇಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದಾರೆ ಎಂದರೆ ಇಲ್ಲಿ ಬೆಳೆಯಲಾಗುತ್ತೆ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿದ ಅವರು ಇದಕ್ಕೇ ಕೂಡಲೆ ಕಡಿವಾಣ ಹಾಕಬೇಕು. ಇಲ್ಲದೆ ಹೋದಲ್ಲಿ ಮುಂದಿನ ಯುವ ಪೀಳಿಗೆಯ ಭವಿಷ್ಯ ನರಕವಾಗಲಿದೆ. ಅದಕ್ಕೆ ನಾವು ಕಾರಣರಾಗುತ್ತೇವೆ ಎಂಬುದನ್ನು ಮರೆಯದಿರಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.
ಅಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ ಖಾತಾ ಬದಲಾವಣೆಗೆ ವರ್ಷಗಟ್ಟಲೆ ವಿಳಂಬ, ಗ್ರಾ.ಪಂ. ಸಿಬ್ಬಂದಿಗೆ ಸರಿಯಾಗಿ ವೇತನ ನೀಡಿಲ್ಲ, ನೌಕರರಿಗೆ ಅನಗತ್ಯ ವೇತನ ಕಡಿತ ಇಂತಹ ಸುಮಾರು ಪ್ರಕರಣಗಳು ಎರಡು ದಿನದಲ್ಲಿ ಪೀಠದ ಮುಂದೆ ಬಂದಿವೆ. ಕಲಬುರಗಿ ನಗರದಲ್ಲಿನ ಆಳಂದ ನಾಕಾ ರಸ್ತೆಯಲ್ಲಿರುವ ಬಾಲಕೀಯರ ಬಾಲ ಮಂದಿರ, ಅಮೂಲ್ಯ ಶಿಶು ಗೃಹ, ಬುದ್ದಿ ಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಸಮಸ್ಯೆಗಳ ಸರಮಾಲೆ ಕಂಡುಬಂದಿವೆ. ಸಿಬ್ಬಂದಿ ಕೊರತೆ, ಸರಿಯಾದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅವಲತ್ತುಕೊಂಡಿದ್ದಾರೆ. ಕೂಡಲೆ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲಾಡಳಿತ ಬಗೆಹರಿಸಬೇಕು. ಸಿಬ್ಬಂದಿ ಭರ್ತಿ, ಕಟ್ಟಡ ನವೀಕರಣ ಬಗ್ಗೆಯೂ ಗಮನಹರಿಸಿ ಎಂದು ತಿಳಿಸಿದರು.
ಸದಸ್ಯರಾದ ಡಾ. ಟಿ.ಶ್ಯಾಮ್ ಭಟ್ ಮಾತನಾಡಿ, ಎರಡು ದಿನಗಳ ಸಾರ್ವಜನಿಕ ಆಲಿಕೆ ಸಂದರ್ಭದಲ್ಲಿ ತಾಲೂಕು ಹಂತದಲ್ಲಿ ಅಧಿಕಾರಿ ಮತ್ತು ಕೆಳಮಟ್ಟದ ಸಿಬ್ಬಂದಿ ಸಾರ್ವಜನಿಕರಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ ಎಂಬ ಸಾಮಾನ್ಯ ದೂರಿದೆ. ಸರ್ಕಾರಿ ಕಚೇರಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಅಧಿಕಾರಿ-ನೌಕರರು ಸೌಜನ್ಯದಿಂದ ಮಾತನಾಡಿಸಿ ಸಮಸ್ಯೆ ಆಲಿಸಿ ಬಗೆಹರಿಸಬೇಕು. ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವೇತನ ಸಾರ್ವಜನಿಕರ ತೆರಿಗೆ ಹಣ ಎಂಬುದನ್ನು ಮರೆಯಬಾರದು ಎಂದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ ಎರಡು ದಿನದಿಂದ ಕಲಬುರಗಿಯಲ್ಲಿ ಆಯೋಗವು ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಮಾಡಿದ್ದು, ಆಯೋಗ ನೀಡಿದ ಆದೇಶಗಳನ್ನು ಚಾಚುತಪ್ಪದೆ ಪಾಲಿಸಲಾಗುವುದು. ಬುದ್ದಿ ಮಾಂದ್ಯ ಮಕ್ಕಳ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ನಾಳೆಯೆ ಬಗೆಹರಿಸಲಾಗುವುದು. ಇನ್ನು ಜೈಲಿನಲ್ಲಿ ಊಟ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಲಾಗುವುದಲ್ಲದೆ ಬಾಕಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥವಾಗಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಅಯೋಗಕ್ಕೆ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಮಾಧವ ಗಿತ್ತೆ, ಆಯೋಗದ ಕಾರ್ಯದರ್ಶಿ ದಿನೇಶ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.