
ಕಲಬುರಗಿ,ಆ.30-ರಾಜ್ಯದ ಹತ್ತು ಮಹಾನಗರ ಪಾಲಿಕೆಗಳ ನಿವೃತ್ತ ನೌಕರರಿಗೆ ದೊರೆಯಬೇಕಿರುವ ಸೇವಾ ಸೌಲಭ್ಯಗಳು ವಿಳಂಬವಾಗುತ್ತಿರುವುದನ್ನು ಪರಿಹಾರಗೊಳಿಸಿಕೊಳ್ಳುವ ಉದ್ದೇಶದಿಂದ “ರಾಜ್ಯ ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಂಘಗಳ ಒಕ್ಕೂಟ” ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ವೀರಭದ್ರ ಸಿಂಪಿ ತಿಳಿಸಿದರು.
ಇಂದಿಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘಗಳಾದ (ಬೆಂಗಳೂರು ಹೊರತು ಪಡಿಸಿ) ಕಲಬುರಗಿ, ಬಳ್ಳಾರಿ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ತುಮಕೂರ, ಮಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆ ಸಂಘಗಳ ಪದಾಧಿಕಾರಿಗಳ ಸಭೆಯನ್ನು ಸೆಪ್ಟೆಂಬರ್ 3 ರಂದು ಬೆಳಿಗ್ಗೆ 9.30ಕ್ಕೆ ಕಲಬುರಗಿಯಲ್ಲಿ ಕರೆಯಲಾಗಿದ್ದು, ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಅಂದಿನ ಸಭೆಯಲ್ಲಿ ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರಿ ನೌಕರರ ಮತ್ತು ಅಬಲಂಬಿತರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಕರ್ನಾಟಕ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದಂತೆ ನಿವೃತ್ತ ನೌಕರರಿಗೂ/ಕುಟುಂಬ ಪಿಂಚಣಿದಾರರಿಗೂ ಜಾರಿಗೊಳಿಸಬೇಕು, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನದ ಮಧ್ಯಂತರ ಶೇ.17ರ ಪರಿಹಾರ ನಿಧಿ ನೀಡುತ್ತಿರುವಂತೆ ಸ್ಥಳೀಯ ಸಂಸ್ಥೆಗಳ ನಿವೃತ್ತ ನೌಕರರಿಗೂ ನೀಡಬೇಕು ಎಂದು ಸಿಂಪಿ ಆಗ್ರಹಿಸಿದರು.
ಮೇಲ್ಕಾಣಿಸಿದ ಬೇಡಿಕೆಗಳು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಲು ಒಕ್ಕೂಟ ರಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಿವಾಜಿ ಜಮಾದಾರ, ಶ್ರೀಕಾಂತ್ ಶೆಟ್ಟಿ, ಶಿವಾನಂದ ಯಳವಂತಗಿ, ಮಹಾದೇವಪ್ಪ ನಾಡೇಪಲಿ,್ಲ ಸುಭಾಶ್ಚಂದ್ರ ದಿಗ್ಗಾಂವ, ರಾಮಚಂದ್ರ ರಡ್ಡಿ, ಜಟ್ಟೆಪ್ಪ ಜಾನಕರ್, ಸುಭಾಷ ಎಚ್, ಕಲ್ಯಾಣಪ್ಪ ಬಿರಾದಾರ, ವಿಶ್ವನಾಥ ರೆಡ್ಡಿ, ಬಾಬುರಾವ ಬಿರಾದಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.