ರಾಜ್ಯ ಬೀಜ ನಿಗಮದ ಚುನಾವಣೆ-ನಾಗನಾಳ ಸೋಮಣ್ಣ ಸ್ವರ್ಧೆ; ಶಾಸಕ ಶ್ರೀನಿವಾಸಗೌಡ ಮತಯಾಚನೆ

ಕೋಲಾರ.ನ೨೧-ಕರ್ನಾಟಕ ರಾಜ್ಯ ಬೀಜ ನಿಗಮದ ಚುನಾವಣೆ ಡಿ.೬ ರಂದು ನಡೆಯಲಿದ್ದು ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಅವರ ಪರವಾಗಿ ಶಾಸಕ ಕೆ.ಶ್ರೀನಿವಾಸಗೌಡ ತಾಲ್ಲೂಕಿನ ವಿವಿಧೆಡೆ ಷೇರುದಾರರ ಮನೆಗಳಿಗೆ ತೆರಳಿ ಮತಯಾಚಿಸಿದರು.
ತಾಲ್ಲೂಕಿನ ತಿಪ್ಪಸಂದ್ರದ ಗೋಪಾಲಪ್ಪ ಹಾಗೂ ವಕೀಲರಾದ ರವಿಕುಮಾರ್ ಅವರ ನಿವಾಸದಲ್ಲಿ ಮತಯಾಚಿಸಿದ ಶಾಸಕರು, ಬೀಜ ನಿಗಮದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ೫೩ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ೩೮೦೦ ಮತದಾರರ ಸುಮಾರು ೧೦ ಸಾವಿರ ಷೇರು ಮೌಲ್ಯದ ಮತಗಳಿವೆ ಎಂದು ತಿಳಿಸಿದರು.
ಅದರಲ್ಲಿ ಶೇ.೪೦ ರಷ್ಟು ಮತಗಳು ಕೋಲಾರ ತಾಲ್ಲೂಕಿನ ಹುತ್ತೂರು, ವಡಗೂರು,ಹೋಳೂರು ಮತ್ತಿತರ ಹೋಬಳಿಗಳಲ್ಲೇ ಇದ್ದು, ಮತದಾರರು ಈ ಬಾರಿ ನಾಗನಾಳ ಸೋಮಣ್ಣರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರೈತರ ಹಿತ ಕಾಯುವ ಸಂಕಲ್ಪದೊಂದಿಗೆ ಸೋಮಣ್ಣ ಚುನಾವಣಾ ಕಣಕ್ಕಿಳಿದಿದ್ದಾರೆ, ಅವರ ಆಯ್ಕೆ ಅತಿ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಮತದಾರರು ಒಮ್ಮನಸ್ಸಿನಿಂದ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಬೀಜನಿಗಮದ ಚುನಾವಣೆಯಲ್ಲಿ ರೈತರಿಗೆ ಹತ್ತಿರವಾದ ಮತ್ತು ರೈತರಾಗಿರುವ ವ್ಯಕ್ತಿಯ ಆಯ್ಕೆ ಅತಿ ಸೂಕ್ತ ಎಂಬ ಕಾರಣದಿಂದ ಸೋಮಣ್ಣರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಕಣಕ್ಕಿಳಿಸಿದ್ದೇನೆ, ಅವರಿಗೆ ನೀಡುವ ಪ್ರತಿ ಮತವೂ ನನಗೆ ನೀಡಿದಂತೆ ಎಂಬ ವಿಶ್ವಾಸದಿಂದ ಮತದಾನ ಮಾಡಿ ಗೆಲ್ಲಿಸಿ ಎಂದು ಕೋರಿದರು.
ಬಿತ್ತನೆ ಬೀಜ ಸಂಗ್ರಹ,ವಿತರಣೆ ಸೇರಿದಂತೆ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೋಮಣ್ಣ ಆಯ್ಕೆ ಸೂಕ್ತವಾಗಿದೆ, ಕೃಷಿಕರೂ ಆದ ಅವರಿಗೆ ಮತ ನೀಡಿ ಎಂದರು.
ವಕೀಲ ರವಿಕುಮಾರ್ ಮಾತನಾಡಿ, ಶಾಸಕ ಕೆ.ಶ್ರೀನಿವಾಸಗೌಡರು ನಮ್ಮ ಮನೆಬಾಗಿಲಿಗೆ ಬಂದು ಮತ ಕೇಳುತ್ತಿರುವಾಗ ನಾವು ಮತ ನೀಡದಿರಲು ಸಾಧ್ಯವೇ ಎಂದು ತಿಳಿಸಿ ನಾಗನಾಳ ಸೋಮಣ್ಣನವರಿಗೆ ಮತ ನೀಡುವುದಾಗಿ ಭರವಸೆ ನೀಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್ ಮತ್ತಿತರರು ಇದ್ದರು.