ರಾಜ್ಯ ಬಿಜೆಪಿ ಸರ್ಕಾರದ ಭೂ ಕಾಯ್ದೆ ತಿದ್ದುಪಡಿ ವಿರೋಧಿಸಿ

ಅಸ್ಕಿಹಾಳ ಬೈಪಾಸ್ ಬಳಿ ರಸ್ತೆ ತಡೆ – ಸಂಚಾರ ಅಸ್ತವ್ಯಸ್ತ
ರಾಯಚೂರು.ನ.05- ರಾಜ್ಯ ಬಿಜೆಪಿ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಸುಡುವ ಮೂಲಕ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಇಂದು ಅಸ್ಕಿಹಾಳ ಬೈಪಾಸ್ ಬಳಿ ರಸ್ತೆ ತಡೆ ಚಳುವಳಿ ನಡೆಸಲಾಯಿತು. ಇದರಿಂದ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ನಗರಕ್ಕೆ ಪ್ರವೇಶಿಸುವ ಏಕೈಕ ಮುಖ್ಯ ರಸ್ತೆಯಾಗಿರುವುದರಿಂದ ಎರಡು ಬದಿಯಲ್ಲಿ ಭಾರೀ ವಾಹನಗಳು ಸ್ಥಗಿತಗೊಂಡಿದ್ದವು. ರಾಜ್ಯ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆದೂರಿ, ಜನತೆಯ ವಿರೋಧ ಲೆಕ್ಕಿಸದೇ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿ ಧಾರೆಯೆರೆಯುವ ಸುಗ್ರೀವಾಜ್ಞೆ ಇದಾಗಿದೆಂದು ದೂರಿದರು. ಅನೈತಿಕ ಮತ್ತು ಕಾನೂನು ಬಾಹೀರ ಈ ಸುಗ್ರೀವಾಜ್ಞೆ ಪ್ರತಿಗಳನ್ನು ರಸ್ತೆ ತಡೆ ಚಳುವಳಿಯಲ್ಲಿ ಸುಡಲಾಯಿತು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕೃಷ್ಣಿ ಉತ್ಪನ್ನ, ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ಕಾರ್ಪೊರೇಟ್ ಕಂಪನಿಗಳಿಗೆ ನೀಡಲಾಗುತ್ತಿದೆಂದು ತೀವ್ರವಾಗಿ ಆರೋಪಿಸಿದರು.
ರಸ್ತೆ ತಡೆ ಚಳುವಳಿ ಸುಧೀರ್ಘ ಅವಧಿವರೆಗೂ ನಡೆದಿದ್ದರಿಂದ ವಾಹನಗಳು ಭಾರೀ ಸಂಖ್ಯೆಯಲ್ಲಿ ನಿಲ್ಲುವಂತಾಗಿತ್ತು. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬಿಜೆಪಿ ಸರ್ಕಾರದ ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಲಾಯಿತು. ತಕ್ಷಣವೇ ರಾಜ್ಯ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಇದನ್ನು ಹಿಂಪಡೆಯದಿದ್ದರೇ, ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು. ರಸ್ತೆ ತಡೆ ಚಳುವಳಿ ತೆರವುಗೊಳಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸಿದರು.
ಈ ಪ್ರತಿಭಟನೆಯಲ್ಲಿ ಕೆ.ಜಿ.ವೀರೇಶ, ಶರಣಪ್ಪ, ಕರಿಯಪ್ಪ, ಜಿಂದಪ್ಪ, ವೀರನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.