ರಾಜ್ಯ ಬಜೆಟ್‍ಗೆ ಮುಖ್ಯಮಂತ್ರಿ ತವರಲ್ಲಿ ಸಾಲ ಸಾಲು ಸಲಹೆ

ಸಂಜೆವಾಣಿ ನ್ಯೂಸ್
ಮೈಸೂರು: ಜ.31:- ಮೈಸೂರು ಮತ್ತೆ ಸ್ವಚ್ಚ ನಗರಿ ಪಟ್ಟ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು, ದೇಶದ ಪ್ರಮುಖ ಪ್ರವಾಸೋದ್ಯಮ ನಗರಿಯಾಗಿ ಪರಿವರ್ತಿಸಬೇಕು. ಯೋಗ ನಗರಿ ಎಂದು ಘೋಷಣೆ ಮಾಡಬೇಕು, ಪೌರಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ಬೇಕು, ಕೈಗಾರಿಕಾ ಪಟ್ಟಣ ಪ್ರಾಧಿಕಾರವಾಗಬೇಕು…
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಇನ್‍ಸ್ಟಿಟ್ಯೂಟ್ ಆಪ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಬಜೆಟ್ ಕುರಿತ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ನಾನಾ ಕ್ಷೇತ್ರದ ಪ್ರಮುಖರಿಂದ ಕೇಳಿಬಂದ ಸಲಹೆಗಳಿವು. ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಅವರು ಮಾತನಾಡಿ, ವಿಮಾನಯಾನ ಸೆವೆಯನ್ನು ಸಮರ್ಪಕವಾಗಿ ಆರಂಭಿಸಬೇಕು, ಮತ್ತೊಮ್ಮೆ ಸ್ವಚ್ಚ ನಗರಿ ಪಟ್ಟ ಪಡೆಯಲು ಯೋಜನೆ ರೂಪಿಸಬೇಕು ಎಂದುಹ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೆ.ಆರ್. ಆಸ್ಪತ್ರೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕು. ರೈತರು ಬೆಳೆದ ಬೆಳೆಗೆ ನೇರ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು. ಆಹಾರೋದ್ಯಮ ಸೃಷ್ಟಿಗೆ ಒತ್ತು ನೀಡಬೇಕು ಎಂದರು.
ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಅವರು ಮಾತನಾಡಿ, ದೇವರಾಜ ಮಾರುಕಟ್ಟೆ ಅಭಿವೃದ್ದಿಪಡಿಸಬೇಕು, ಮಹಾರಾಣಿ ಕಾಲೇಜು 3 ನೇ ಮಹಡಿ ನಿರ್ಮಿಸಬೇಕು. ಮಹಾರಾಣಿ ಕಾಲೇಜು ವಿದ್ಯಾರ್ಥಿನಿಲಯ ವಿಸ್ತರಿಸಬೇಕು ಎಂದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಮಾತನಾಡಿ, ಪಾಲಿಕೆ ಅಧೀನದಲ್ಲಿ ನಡೆಯುತ್ತಿರುವ ವಾಣಿ ವಿಲಾಸ ನೀರು ಸರಬರಾಜು ಮಡಳಿ ಪ್ರತ್ಯೇಕ ಬೋರ್ಡ್ ಆಗಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣ, ವಿಶೇಷ ಚೇತನರ ಕೌಶಲ್ಯ ಅಭಿವೃದ್ಧಿ ಗೆ ಒತ್ತು ನೀಡಲು ಯೋಜನೆ ಕೈಗೊಳ್ಳಬೇಕೆಂದರು.
ಸ್‍ಪ್ ವೀಲ್ ಟ್ರಾವೆಲ್ಸ್‍ನ ಬಿ.ಎಸ್. ಪ್ರಶಾಂತ್ ಅವರು ಮಾತನಾಡಿ, ಹೆರಿಟೇಜ್ ಕಟ್ಟಡ ಉಳಿಸಿಕೊಳ್ಳುವ ಮೂಲಕ ನಗರಕ್ಕೆ ಪ್ರವಾಸಿಗರನ್ನು ಹೆಚ್ಚಿಸಬೇಕು. ಫಿಲಂಸಿಟಿ ಯೋಜನೆ ಅನುಷ್ಠಾನಕ್ಕೆ ಅನುದಾನ ನೀಡಬೇಕೆಂದು ಸಲಹೆ ನೀಡಿದರು.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್‍ನ ಗೌರವಾಧ್ಯಕ್ಷ ಜಯಕುಮಾರ್ ಅವರು ಮಾತನಾಡಿ, ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯವಿರುವ ಪೂರಕ ಸೌಲಭ್ಯಗಳನ್ನು ಒದಗಿಸಬೇಕು. ಹೊರ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ವಿಧಿಸುವ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ಕ್ರೆಡೈ ಹಾಗೂ ಯೋಗ ಪೌಂಡೇಷನ್ ಅಧ್ಯಕ್ಷ ಶ್ರೀಹರಿ ಮಾತನಾಡಿ, ಯೋಗ ನಗರಿ ಎಂದು ಅಧಿಕೃತ ಘೋಷಣೆಯಾಗಬೇಕು. ಮೈಸೂರಿನಲ್ಲಿ ಕೌಶಲ್ಯ ಕೇಂದ್ರ ನಿರ್ಮಾಣವಾಗಬೇಕು ಎಂದರು.
ಮೈಸೂರು ಗ್ರಾಹಕ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಭಾಮಿ ವಿ. ಶೆಣೈ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಉದ್ಯಮಿ ಪಿ.ವಿ. ಗಿರಿ, ಪಾರಂಪರಿಕ ತಜ್ಞ ಎನ್.ಎಸ್. ರಂಗರಾಜು, ಹಾಗೂ ಇನ್ನಿತರರು ಇದ್ದರು