ರಾಜ್ಯ ಪ್ರವೇಶಿಸಿದ ಮುಂಗಾರು ಮಾರುತ

ಬೆಂಗಳೂರು, ಜೂ.4-ತಜ್ಞರ ಮಾಹಿತಿಯಂತೆ ಮಳೆಯ ಮಾರುತಗಳು ಇಂದು ಕರ್ನಾಟಕವನ್ನು ಪ್ರವೇಶಿಸಿವೆ. ಇದರಿಂದಾಗಿ ರಾಜಧಾನಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಇಂದುಭಾರೀ ಮಳೆಯಾಗಿದೆ.

ಪರಿಣಾಮ ಇಷ್ಟು ದಿನ ಬಿಸಿಲಿನಿಂದ ಕಾವೇರಿದ್ದ ನೆಲ ತಂಪಾಗಿದ್ದು, ಜನ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ವರ್ಷ ಕರ್ನಾಟಕದಲ್ಲಿ ಸೆಪ್ಟೆಂಬರ್​ವರೆಗೆ ಮಳೆ ಬಂದರೂ ಸಹ ಸಾಮಾನ್ಯ ಮಳೆಯೇ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿರಲಿದ್ದು ಕೇಂದ್ರ ಭಾಗದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಇನ್ನೂ ರಾಜ್ಯ ರಾಜಧಾನಿಯಲ್ಲಿ ಎಂದಿನಂತೆ ಉತ್ತಮ ಮಳೆಯಾಗಲಿದೆ. ಆದರೆ, ಉತ್ತರ ಹಾಗೂ ದಕ್ಷಿಣ ಒಳನಾಡುಗಳಲ್ಲಿ ವಾಡಿಕೆಗಿಂತ ಕಡಿಮೆ ಅಥವಾ ಸಾಮಾನ್ಯ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗಿದೆ. ಮಂಗಳೂರಿನಲ್ಲಿ 114 ಎಂಎಂ, ಕಾರವಾರ 70 ಎಂಎಂ, ಹಾಸನ 33 ಎಂಎಂ, ಮೈಸೂರು 56 ಎಂಎಂ ಹಾಗೂ ಬೆಂಗಳೂರಿನಲ್ಲಿ 52.4 ಎಂಎಂ ಮಳೆಯಾಗಿದೆ. ಅಲ್ಲದೆ, ಕರ್ನಾಟಕದ ದಕ್ಷಿಣ ಭಾಗಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ ಹಾಗೂ ಬೆಂಗಳೂರಿನಲ್ಲಿ ಮುಂದಿನ 36 ಗಂಟೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.