ರಾಜ್ಯ ಚುನಾವಣೆ ಗೆಲ್ಲಲು ಬಿಜೆಪಿ ವರಿಷ್ಠರ ರಣನೀತಿ

ಬೆಂಗಳೂರು,ಜ.೧೭:ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ೨ನೇ ದಿನವಾದ ಇಂದು ಈ ವರ್ಷ ನಡೆಯುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಗೆಲುವಿಗೆ ರೂಪಿಸಬೇಕಾದ ರಣತಂತ್ರಗಳ ಬಗ್ಗೆ ಚರ್ಚೆ ನಡೆದಿದ್ದು, ಅದರಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿವೆ.ಬಿಜೆಪಿಯ ವರಿಷ್ಠರು ಕರ್ನಾಟಕ ಚುನಾವಣೆಯತ್ತ ಹೆಚ್ಚಿನ ಚಿತ್ತ ಹರಿಸಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಿದ ಕರ್ನಾಟಕದ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದ್ದು, ಶತಾಯ-ಗತಾಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಏನೆಲ್ಲ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆ ಇಂದೂ ಸಹ ಚರ್ಚೆಗಳು ನಡೆದವು.ಕಾರ್ಯಕಾರಣಿಯ ಮೊದಲ ದಿನವಾದ ನಿನ್ನೆ ಸಹ ಕರ್ನಾಟಕ ಚುನಾವಣೆಗಳ ಬಗ್ಗೆ ಚರ್ಚೆ ನಡೆದಿತ್ತು, ಇಂದೂ ಸಹ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕರ್ನಾಟಕ ಚುನಾವಣೆಯ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿದ್ದು, ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ, ಮತ್ತೆ ಅಧಿಕಾರದ ಗದ್ದುಗೆ ಏರಲು ಯಾವೆಲ್ಲ ಕಾರ್ಯಕ್ರಮಗಳನ್ನು ರೂಪಿಸಬೇಕು, ಪ್ರಚಾರದ ವೈಖರಿ, ಚುನಾವಣಾ ಪೂರ್ವದಲ್ಲಿ ಎಲ್ಲೆಲ್ಲಿ ಸಮಾವೇಶಗಳನ್ನು ನಡೆಸಬೇಕು, ಯಾವ ಯಾವ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಸಾರ್ವಜನಿಕ ಸಭೆಗಳನ್ನು ಆಯೋಜಿಸಬೇಕು ಎಂಬ ಬಗ್ಗೆ ಸಮಗ್ರ ಚರ್ಚೆಗಳು ನಡೆದಿವೆ ಎಂದು ಪಕ್ಷದ ಮೂಲಗಳು ಹೇಳಿವೆ.
ರಥಯಾತ್ರೆ ಕಾರ್ಯಕಾರಿಣಿಯ ಮೊದಲ ದಿನ ರಾಜ್ಯಚುನಾವಣೆಯ ಬಗ್ಗೆ ಚರ್ಚೆ ನಡೆಸಿದ ನಂತರ ವಿಧಾನ ಮಂಡಲದ ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್‌ನ ಬಸ್‌ಯಾತ್ರೆಗೆ ಎದಿರೇಟು ನೀಡಲು ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆಯನ್ನು ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.
ಯಡಿಯೂರಪ್ಪ ಜತೆ ಪ್ರತ್ಯೇಕ ಚರ್ಚೆ
ನಿನ್ನೆಯ ಕಾರ್ಯಕಾರಿಣಿ ನಂತರ ಪ್ರಧಾನಿಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ಪ್ರತ್ಯೇಕವಾಗಿ ಅರ್ಧತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು ಕುತೂಹಲಕ್ಕೆಡೆ ಮಾಡಿದೆ.ಪ್ರಧಾನಿ ಮೋದಿ ಅವರು ಮುಂದಿನ ಚುನಾವಣೆಯಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ ಎಂಬ ಬಗ್ಗೆ ಯಡಿಯೂರಪ್ಪನವರಿಂದ ಪಡೆದುಕೊಂಡಿದ್ದಾರೆ. ಯಡಿಯೂರಪ್ಪರವರು ವಾಸ್ತವ ಚಿತ್ರಣವನ್ನು ಮೋದಿ ಅವರಿಗೆ ವಿವರಿಸಿದ್ದು, ಮತ್ತೆ ಅಧಿಕಾರ ಹಿಡಿಯಲು ಏನು ಮಾಡಬೇಕು ಎಂಬ ಬಗ್ಗೆಯೂ ತಮ್ಮದೇ ಆದ ಕೆಲ ರಣನೀತಿಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.ಪ್ರಧಾನಿ ಮೋದಿ ಅವರು ರಾಜ್ಯದ ಬೇರ್‍ಯಾವ ನಾಯಕರ ಜತೆ ಚರ್ಚೆ ಮಾಡದೆ ಯಡಿಯೂರಪ್ಪರವರ ಜತೆ ಚರ್ಚಿಸಿರುವುದು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಮತ್ತೆ ಮಣೆ ಹಾಕುವ ಸಾಧ್ಯತೆಗಳನ್ನು ಬಿಂಬಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.