ರಾಜ್ಯ ಕೈ ಉಸ್ತುವಾರಿ ಬದಲಾವಣೆ ಸಿದ್ದುಗೆ ಹಿನ್ನಡೆ

ಬೆಂಗಳೂರು, ಸೆ. ೧೨- ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ನಡೆಸಿ, ಪದಾಧಿಕಾರಿಗಳ ಬದಲಾವಣೆ ಮಾಡಲಾಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನೂ ಸಹ ಬದಲಾಯಿಸಲಾಗಿದೆ. ಇದುವರೆಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಉಸ್ತುವಾರಿಯಿಂದ ತೆಗೆದು, ರಣದೀಪ್ ಸುರ್ಜೆವಾಲಾ ಅವರನ್ನು ರಾಜ್ಯ ಕಾಂಗ್ರೆಸ್ ನ ನೂತನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರಾಗಿದ್ದ ಕೆ.ಸಿ. ವೇಣುಗೋಪಾಲ್ ಅವರನ್ನು ರಾಜ್ಯ ಉಸ್ತುವಾರಿಯಿಂದ ಬದಲಿಸಿರುವುದು ಸಿದ್ದರಾಮಯ್ಯ ಅವರಿಗೆ ಆಗಿರುವ ಹಿನ್ನೆಡೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಉಸ್ತುವಾರಿಯಾಗಿದ್ದ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಅವರ ಬೆನ್ನಿಗೆ ಬಲವಾಗಿ ನಿಂತಿದ್ದರು. ಎಂತಹ ಸಂದರ್ಭ ಬಂದಾಗಲೂ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಅವರ ಪರವಾಗಿದ್ದರು.
ರಾಜ್ಯದ ಹಲವು ನಾಯಕರು, ಹಲವು ಬಾರಿ ಕೆ.ಸಿ. ವೇಣುಗೋಪಾಲ್ ಬದಲಾವಣೆಗೆ ಒತ್ತಡ ಹೇರಿದ್ದರೂ, ವರಿಷ್ಠನಾಯಕರು ಯಾವುದಕ್ಕೂ ಮಣಿಯದೆ ಅವರನ್ನೇ ಮುಂದುವರೆಸಿದ್ದರು. ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರ ನಡುವಣ ಬಾಂಧವ್ಯ ಗಟ್ಟಿಯಾಗಲು ಕಾರಣಕರ್ತರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ನಂತರ, ಕೆ.ಸಿ. ವೇಣುಗೋಪಾಲ್ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದು ಅಂಗೀಕಾರವಾಗಿರಲಿಲ್ಲ.
ಕಾಂಗ್ರೆಸ್, ಜೆಡಿಎಸ್ ಸರ್ಕಾರ ಪತನವಾದ ಸಂದರ್ಭದಲ್ಲೂ ಸಿದ್ದರಾಮಯ್ಯ ಅವರ ವಿರುದ್ಧ ಅಪಸ್ವರ ಎತ್ತಿದಾಗಲೂ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಅವರ ಪರ ನಿಲ್ಲುತ್ತಿದ್ದಾರೆ ಎಂಬ ಆರೋಪಗಳು ಪಕ್ಷದಲ್ಲಿ ಕೇಳಿಬಂದಿದ್ದವು.
ಉಸ್ತುವಾಗಿ ವೇಣುಗೋಪಾಲ್, ಸಿದ್ದರಾಮಯ್ಯ ಅವರ ಜೊತೆ ಅಡೆಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಮಯ ಸಿಕ್ಕಾಗಲೆಲ್ಲಾ ರಾಜ್ಯದ ಕೆಲ ನಾಯಕರು ವರಿಷ್ಠರಿಗೆ ಅವಲತ್ತುಗೊಂಡಿದ್ದರು.
ಈಗ ಎಲ್ಲದ್ದಕ್ಕೂ ಕಾಲ ಕೂಡಿಬಂದಿದ್ದು, ವೇಣುಗೋಪಾಲ್ ರಾಜ್ಯ ರಾಜಕಾರಣದಿಂದ ನಿರ್ಗಮನಗೊಂಡಿದ್ದಾರೆ. ಈ ನಿರ್ಗಮನ ಸಿದ್ದರಾಮಯ್ಯ ಅವರಿಗೆ ಆದ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಸಾಧಿಸಿದ್ದ
ಬಿಗಿಹಿಡಿತಕ್ಕೆ ಏಟು ಬಿದ್ದಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು.
ಕೆ.ಸಿ. ವೇಣುಗೋಪಾಲ್ ಅವರ ನಿರ್ಗಮನ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹಿನ್ನೆಡೆಯಾಗಲಿದ್ದು, ಅವರಿಗೆ ಪಕ್ಷದಲ್ಲಿ ಇದ್ದ ಬಲಕ್ಕೂ ಕುಂದುಂಟಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಬಲವಾಗಿ ನಿಂತು ಅವರ ಪರ ವಾದಿಸುತ್ತಿದ್ದ ಗಟ್ಟಿಧ್ವನಿ ಈಗ ಸಿದ್ದರಾಮಯ್ಯ ಅವರ ಪಾಲಿಗೆ ಇಲ್ಲದಂತಾಗಿರುವುದಂತೂ ನಿಜ.
ರಾಜ್ಯ ಉಸ್ತುವಾರಿಯಾಗಿ ಹೊಸದಾಗಿ ನೇಮಕಗೊಂಡಿರುವ ಸುರ್ಜೆವಾಲಾ, ರಾಹುಲ್ ಗಾಂಧಿ ಅವರ ಅತ್ಯಾಪ್ತರು ಎಂಬುದು ಗಮನಿಸಬೇಕಾದ ಅಂಶ. ಹಾಗಾಗಿ ಇನ್ನುಮುಂದೆ ರಾಜ್ಯ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಅವರ ಹಿಡಿತ ಬಲವಾಗುವುದು ನಿಶ್ಚಿತ. ರಾಹುಲ್ ಗಾಂಧಿ ಅವರ ಅಣತಿಯಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ನಡೆಯಲಿದೆ.