ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಸಂಸದ ಜಾಧವ್ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ.ಮಾ.24:ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳು ಹಾಗೂ ಖಾಸಗೀಕರಣ ವಿರೋಧಿಸಿ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಕರ್ನಾಟಕ ವಿರೋಧಿ ನೀತಿಯನ್ನು ಖಂಡಿಸಿ ಬುಧವಾರ ಭಾರತ ಕಮ್ಯುನಿಸ್ಟ್ ಮಾರ್ಕಸಿಸ್ಟ್ ಪಕ್ಷದ ಕಾರ್ಯಕರ್ತರು ಸಂಸದ ಡಾ. ಉಮೇಶ್ ಜಾಧವ್ ಅವರ ಕಚೇರಿಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಕಚೇರಿಯ ಆಪ್ತ ಸಹಾಯಕನ ಮೂಲಕ ಸಂಸದರಿಗೆ, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೆಡೆ ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವಾಗಲೇ ಇನ್ನೊಂದೆಡೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿದೆ. ಅಂದು ರಾಜರು ರೈತರ ಭೂಮಿಯನ್ನು ಕಸಿದು ರಾಜರ ಪರಿವಾರದವರಿಗೆ ನೀಡಿದಂತೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ಅಂಬಾನಿ, ಅದಾನಿ ಮುಂತಾದ ದೇಶಿಯ ಹಾಗೂ ವಿದೇಶಿ ಕಂಪೆನಿಗಳಿಗೆ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ತೊಗರಿ ಹೆಚ್ಚು ಬೆಳೆಯಲಾಗುತ್ತಿದ್ದು, ತೊಗರಿ ಪಾರ್ಕ್ ಸ್ಥಾಪಿಸಬೇಕಿತ್ತು. ಆ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕಲಬುರ್ಗಿಯಲ್ಲಿನ ರೈಲ್ವೆ ವಿಭಾಗೀಯ ಕಚೇರಿಯನ್ನು ಕೈಬಿಟ್ಟಿದ್ದು ವಿಷಾಧಕರ ಸಂಗತಿ ಎಂದು ಆಕ್ಷೇಪಿಸಿದರು.
ಸಿಕಿಂದ್ರಾಬಾದ್ ಮತ್ತು ಸೊಲ್ಲಾಪೂರ ವಲಯಗಳಿಗೆ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಕೇಂದ್ರ ಸ್ಥಾನ ಕಲಬುರ್ಗಿ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಹುದೊಡ್ಡ ಅನ್ಯಾಯ ಮಾಡಿದೆ. ಇದು ಜಿಲ್ಲೆಯ ಜನತೆಗೆ ಬಗೆದ ದ್ರೋಹ ಎಂದು ಅವರು ಕಿಡಿಕಾರಿದರು.
ನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಏಮ್ಸ್‍ನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ದೂರಿದ ಅವರು, ಕೂಡಲೇ ನಗರದಲ್ಲಿ ಏಮ್ಸ್ ಆಸ್ಪತ್ರೆ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಜವಳಿ ಪಾರ್ಕ್ ಎತ್ತಂಗಡಿಯನ್ನು ವಿರೋಧಿಸಿದ ಅವರು, ವಿದ್ಯಾವಂತ ಯುವಕ, ಯುವತಿಯರು ಕೆಲಸವಿಲ್ಲದೇ ಬೇರೆಡೆ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಕಲಬುರ್ಗಿಯಲ್ಲಿಯೇ ಜವಳಿ ಪಾರ್ಕ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರಿನ ಖಾಸಗೀಕರಣವನ್ನು ವಿರೋಧಿಸಿದ ಅವರು, ಕೂಡಲೇ ಎಲ್‍ಎಂಟಿಯವರಿಗೆ ಕುಡಿಯುವ ನೀರಿನ ಹೊಣೆಯನ್ನು ಕೊಟ್ಟಿದ್ದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀಮತಿ ಕೆ. ನೀಲಾ, ಭೀಮಶೆಟ್ಟಿ ಯಂಪಳ್ಳಿ, ಅಶೋಕ್ ಮ್ಯಾಗೇರಿ, ಪಾಂಡುರಂಗ್ ಮಾವಿನಕರ್, ಎಂ.ಬಿ. ಸಜ್ಜನ್ ಮುಂತಾದವರು ಪಾಲ್ಗೊಂಡಿದ್ದರು.