ರಾಜ್ಯ, ಕೇಂದ್ರ ಸರ್ಕಾರದ ರೈತವಿರೋಧಿ ಧೋರಣೆ ವಿರುದ್ಧ ಆಕ್ರೋಶ

ಕೆ.ಆರ್.ಪೇಟೆ, ನ.18: ರೈತರು ಹಾಗೂ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಕಬ್ಬು ಬೆಳೆಗಾರರು, ರೈತಮುಖಂಡರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತವಿರೋಧಿ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಕವಳ್ಳಿಯಲ್ಲಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಕಳೆದ ಮೂರು ವರ್ಷಗಳಿಂದ ರೈತರಿಗೆ ಕಬ್ಬಿನ ಎಫ್.ಆರ್.ಪಿ ದರವನ್ನು ಹೆಚ್ಚಿಸಿಲ್ಲ, ಪ್ರಸ್ತುತ ಪ್ರತೀ ಟನ್ ಕಬ್ಬಿಗೆ ನೀಡುತ್ತಿರುವ 2750ರೂ ದರವನ್ನು 4ಸಾವಿರ ರೂಗಳಿಗೆ ಹೆಚ್ಚಿಸಬೇಕು.ಕಬ್ಬು ಕಟಾವು ಮಾಡುವ ವಿಚಾರದಲ್ಲಿ ಕಾರ್ಖಾನೆ ಸೂಪರ್ ವೈಸರ್ ಗಳು ಕಮಿಷನ್ ಕೇಳುತ್ತಿರುವುದು ಮೇಸ್ತ್ರಿಗಳು ಕಬ್ಬು ಕಟಾವು ಮಾಡಲು ಹೆಚ್ಚಿನ ಹಣಕ್ಕೆ ಒತ್ತಾಯಿಸುವುದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ನಡೆಸಿ ರೈತರಿಗೆ ಮಂಕುಬೂದಿ ಎರಚಿಹೋಗಿರುವ ರಾಜ್ಯದ ಕೃಷಿಸಚಿವ ಬಿ.ಸಿ.ಪಾಟೀಲ್ ಮತ್ತು ರಾಜ್ಯದ ತೋಟಗಾರಿಕೆ ಸಚಿವ ಡಾ.ನಾರಾಯಣಗೌಡರಿಗೆ ರೈತರ ಕಷ್ಟಸುಖಗಳ ಅರಿವಿಲ್ಲ ಜೊತೆಗೆ ಕೃಷಿ ಚಟುವಟಿಕೆಗಳ ಬಗ್ಗೆ ಕನಿಷ್ಠ ಜ್ಞಾನವೇ ಇಲ್ಲ ಹೊಡೆಕಟ್ಟಿರುವ ಭತ್ತದ ಗದ್ದೆಗೆ ಯೂರಿಯಾ ಗೊಬ್ಬರವನ್ನು ಎರಚಿ ಕೈಗೆ ಬಂದ ಬೆಳೆಯು ಬಾಯಿಗೆ ಬರದಂತೆ ಮಾಡಿ ಭತ್ತದ ಬೆಳೆಯು ನಾಶವಾಗಲು ಕಾರಣರಾಗಿರುವ ಸಚಿವಧ್ವಯರು ರಾಜ್ಯದ ರೈತರ ಕ್ಷಮೆಯಾಚಿಸಬೇಕು ಎಂದು ನಾಗೇಂದ್ರ ಆಗ್ರಹಿಸಿದರು.
ಕೆ.ಆರ್.ಪೇಟೆ ತಾಲೂಕು ಆಡಳಿತವು ಭ್ರಷ್ಠಾಚಾರದ ಕೊಂಪೆಯಾಗಿದೆ ತಾಲೂಕು ಕಛೇರಿಯಲ್ಲಿ ಲಂಚವು ತಾಂಡವವಾಡುತ್ತಿದ್ದು ಲಂಚ ನೀಡದಿದ್ದರೆ ಯಾವುದೇ ಕೆಲಸವಾಗುತ್ತಿಲ್ಲ. ತಹಶೀಲ್ದಾರ್ ಶಿವಮೂರ್ತಿ ರೈತವಿರೋಧಿ ಧೋರಣೆಯನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ರೈತನಾಯಕ ಮುದುಗೆರೆ ರಾಜೇಗೌಡ ತಹಶೀಲ್ದಾರ್ ಅವರು ಮಾತೃಹೃದಯಿಗಳಾಗಿ ಕೆಲಸ ಮಾಡಬೇಕು. ರೈತರಿಗೆ ಸಂವಿಧಾನಬದ್ಧವಾಗಿ ಕಾನೂನಿನ ಪರಿಮಿತಿಯೊಳಗೆ ಮಾಡಬಹುದಾದ ಕೆಲಸ ಕಾರ್ಯಗಳನ್ನು ನಿಗಧಿತ ಅವಧಿಯೊಳಗೆ ಮಾಡಿಸಿಕೊಡಬೇಕು. ತಾಲೂಕು ಕಛೇರಿಯಲ್ಲಿ ಹಾದಿತಪ್ಪಿರುವ ಭ್ರಷ್ಠ ನೌಕರರನ್ನು ಹತೋಟಿಗೆ ತರಬೇಕು. ತಾಲೂಕು ಕಛೇರಿಯ ಆವರಣದಲ್ಲಿ ಎಂದಿನಂತೆ ಯಾವುದೇ ಶುಲ್ಕವಿಲ್ಲದಂತೆ ಉಚಿತವಾಗಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜೇಗೌಡ ಒತ್ತಾಯಿಸಿದರು…
ಮಂಡ್ಯ ಜಿಲ್ಲಾ ರೈತಸಂಘದ ಅಧ್ಯಕ್ಷ ಕೆಂಪೂಗೌಡ ಮಾತನಾಡಿ ರೈತರು ತಮ್ಮ ಮನೆಗಳ ನಿರ್ಮಾಣಕ್ಕೆ ಎತ್ತಿನಗಾಡಿಯಲ್ಲಿ ಸಾಗಿಸುವ ಮರಳು ಸಾಗಾಣಿಕೆಗೆ ತಹಶೀಲ್ದಾರ್ ಮತ್ತು ಪೆÇೀಲಿಸರು ತೊಂದರೆ ನೀಡಬಾರದು. ರೈತರು ಸಂತೋಷವಾಗಿ ನೆಮ್ಮದಿಯಿಂದಿದ್ದರೆ ರಾಜ್ಯ ಮತ್ತು ದೇಶಗಳು ಸಮೃದ್ಧಿಯಾಗಿರುತ್ತವೆ ಎಂಬ ಸತ್ಯ ಅರಿಯಬೇಕು. ರೈತವಿರೋಧಿಯಾದ ಭೂಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಜಾರಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ ತಾಲೂಕು ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತವನ್ನು ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಕಾನೂನಿನ ಪರಿಮಿತಿಯೊಳಗಿರುವ ಎಲ್ಲಾ ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡುತ್ತಿದ್ದೇನೆ. ರೈತರಿಗೆ ಉತ್ತಮವಾದ ಆಡಳಿತ ನೀಡುವಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಅಂಕಿಅಂಶಗಳ ಸಮೇತ ಸಭೆಗೆ ಮಾಹಿತಿ ನೀಡಿದರು.ಕಬ್ಬು ಬೆಳೆಗಾರರ ಸಮಸ್ಯೆಗಳ ಇತ್ಯರ್ಥಕ್ಕೆ ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ ಅವರ ನೇತೃತ್ವದಲ್ಲಿ ಸಧ್ಯದಲ್ಲಿಯೇ ಸಭೆ ಕರೆದು ಅನುಕೂಲ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.