ಬೀದರ್:ಎ.7: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಕುರಿತಾದ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸಲು ಸಿದ್ಧಪಡಿಸಿರುವ ಮಾಹಿತಿ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಮತ್ತು ಸಿದ್ದರಾಜು ಅವರು ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರಕಾರ ವಿವಿಧ ನಿಗಮಗಳ ಮೂಲಕ ಜಾರಿಗೊಳಿಸಿರುವ ಜನಪರ, ಕಲ್ಯಾಣ ಮತ್ತು ಅಭಿವೃದ್ದಿ ಯೋಜನೆಗಳ ಮಾಹಿತಿಯನ್ನು `ನವಭಾರತಕ್ಕಾಗಿ ನವ ಯೋಜನೆಗಳು’ ಕೃತಿ ಒಳಗೊಂಡಿದೆ. ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಶ್ರಮಕ್ಕೆ ಶ್ಲಾಘಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ತಲುಪಬೇಕು ಎನ್ನುವುದು ಪ್ರಧಾನಿಯವರ, ಮುಖ್ಯಮಂತ್ರಿಯವರ ಆಶಯವಾಗಿದೆ. ನಾನಾ ಕಾರಣಗಳಿಂದಾಗಿ ಹೆಚ್ಚಿನ ಯೋಜನೆಗಳ ಮಾಹಿತಿ ಜನರಿಗೆ ತಲುಪುತ್ತಿರಲಿಲ್ಲ. ಯೋಜನೆಗಳ ಉದ್ದೇಶ ಈಡೇರುವಂತಾಗಲು ಸಾಮಾನ್ಯ ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಅತ್ಯುತ್ತಮ ಅಭಿವೃದ್ದಿ ಯೋಜನೆಗಳನ್ನು ರೂಪಿಸಿವೆ. ಜನ ಕೇಂದ್ರೀತ ಯೋಜನೆಗಳಿಂದಾಗಿ ಭಾರೀ ಬದಲಾವಣೆ ಆಗಿದೆ. ಹೆಚ್ಚು ಹೆಚ್ಚು ಜನರಿಗೆ ಯೋಜನೆಗಳ ಲಾಭ ತಲುಪಿಸುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಒಳಗೊಂಡಿದ್ದ ವಸುದೈವ ಕುಟುಂಬಕಂ ಪುಸ್ತಕ ಪ್ರಕಟಿಸಲಾಗಿತ್ತು. ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಾದ್ಯಂತ ಈ ಕುರಿತು ಜಾಗೃತಿ ಮೂಡಿಸಲಾಗಿದೆ. ಮನೆ ಮನೆಗೆ ತೆರಳಿ ಯೋಜನೆಗಳ ಮಾಹಿತಿ ನೀಡಲಾಗಿದೆ. ಕೇಂದ್ರ ಸರಕಾರದ 170 ಕ್ಕೂ ಅಧಿಕ ಯೋಜನೆಗಳ ಮತ್ತು ರಾಜ್ಯ ಸರಕಾರದ 40 ಕ್ಕೂ ಹೆಚ್ಚು ಯೋಜನೆಗಳ ಮಾಹಿತಿ ಸಂಗ್ರಹಿಸಿ ಜನರಿಗೆ ನೀಡಲಾಗಿದೆ ಎಂದಿದ್ದಾರೆ.
ಬೀದರ್ ಉತ್ತರ ಕ್ಷೇತ್ರದ 54 ಗ್ರಾಮಗಳ, 17,000 ಪರಿವಾರಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸಲಾಗಿದೆ. ವಿಧವೆಯರಿಗೆ, ವೃದ್ದರಿಗೆ, ವಿಶೇಷ ಚೇತನರಿಗೆ ಸರಕಾರದ ಸೌಲಭ್ಯಗಳನ್ನು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಮೂಲಕ ತಲುಪಿಸಲಾಗಿದೆ. ಸಾಮಾನ್ಯ ಜನರ ಬದುಕನ್ನು ಉತ್ತಮಗೊಳಿಸುವ ಕಾರ್ಯವನ್ನು ಮುಂದುವರೆಸಲಾಗುತ್ತದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ತಿಳಿಸಿದ್ದಾರೆ.