ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳು ಕೇವಲ ಘೋಷಣೆ

ಕಲಬುರಗಿ:ಡಿ.11: ಆಮ್ ಆದ್ಮಿ ಪಕ್ಷದ ರೀತಿಯಲ್ಲಿ ದೆಹಲಿ ಮತ್ತು ಪಂಜಾಬ್‍ನಲ್ಲಿ ಘೋಷಿಸಿದ ರೀತಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿದ್ದು, ಆ ಯೋಜನೆಗಳು ಕೇವಲ ಘೋಷಣೆಯಾಗಿದ್ದು, ಅನುಷ್ಠಾನಕ್ಕೆ ಬಂದಿಲ್ಲ. ಈ ಸಂಬಂಧ ಪಕ್ಷವು ಹೋರಾಟ ಮಾಡಲಿದೆ ಎಂದು ಅಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜಿ. ಮಲ್ಕಪ್ಪಗೋಳ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರಿಗಾಗಿ ಹೋರಾಟ ಮತ್ತು ಸಂಘಟನೆ ಮಾಡಲು ನಿರ್ಧರಿಸಿದೆ. ನೂತನ ಜಿಲ್ಲಾ ಸಮಿತಿಯು ಜಿಲ್ಲೆಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟವನ್ನು ರೂಪಿಸಲಿದೆ ಎಂದರು.
ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಪಕ್ಷದ ಸಮಿತಿಗಳನ್ನು ರಚಿಸಲಾಗುವುದು. ಮುಂಬರುವ ದಿನಗಳಲ್ಲಿ ಮೊದಲ ಆದ್ಯತೆ ಮೇರೆಗೆ ಎಲ್ಲ ವರ್ಗದ ಮಹಿಳೆಯರಿಗೆ ಪಕ್ಷದಲ್ಲಿ ಜೋಡಿಸುವುದು, ಆಟೋ ಚಾಲಕರ ಸಂಘ, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ನಿವೃತ್ತ ನೌಕರರು, ಮಾಜಿ ಸೈನಿಕರು, ರೈತಾಪಿ ಸಂಘ ಮತ್ತು ಯುವ ಜನತೆಯನ್ನು ಸಹ ಪಕ್ಷಕ್ಕೆ ಕರೆತರುವುದು ಮಾಡಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಹಿಂದಿನ ಸರ್ಕಾರ ಮತ್ತು ಪ್ರಸ್ತುತ ಸರ್ಕಾರ ನೆಟೆರೋಗ, ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಪರಿಹಾರ ಘೋಷಣೆ ಮಾಡಿದ್ದರೂ ಸಹ ಇಲ್ಲಿಯವರೆಗೆ ರೈತರ ಖಾತೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಸರ್ಕಾರಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿವೆ. ಆದ್ದರಿಂದ ರೈತರ ಬಾಳು ಹಾಳಾಗಿದೆ. ಹೀಗಾಗಿ ಪಕ್ಷವು ಬೃಹತ್ ಹೋರಾಟ ರೂಪಿಸಿ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿದೆ. ಪೌಷ್ಠಿಕಾಂಶದ ಗುಣಮಟ್ಟ ಕುಗ್ಗಿಹೋಗಿದೆ. ಮಕ್ಕಳು ಮತ್ತು ಶಿಕ್ಷಕರ ಅನುಪಾತದಲ್ಲಿ ಭಾರಿ ವ್ಯತ್ಯಾಸವಾಗಿದ್ದು, ಸಮಾಜಕ್ಕೆ ಕೊಡುಗೆ ನೀಡಬೇಕಾದಂತಹ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ರೀತಿಯಲ್ಲಿ ಕಾರ್ಯಪ್ರವೃತ್ತವಾಗುತ್ತದೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ಪಕ್ಷದ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಅಶೋಕಕುಮಾರ್ ಮಲಕಪ್ಪಗೋಳ್, ಸಂಘಟನಾ ಕಾರ್ಯದರ್ಶಿಗಳಾಗಿ ಜಗದೀಶ್ ಸಾಗರ್, ಕಿರಣ್ ರಾಠೋಡ್, ಈರಣ್ಣಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾಗಿ ಜಗದೀಶ್ ಬಳ್ಳಾರಿ, ಕಾರ್ಯದರ್ಶಿಗಳಾಗಿ ಬಸವರಾಜ್ ತಳೇಕರ್, ಶಿವಕುಮಾರ್ ಖೇಡ್, ಮೊಹ್ಮದ್ ಜಾಗಿರದಾರ್, ಮಾಧ್ಯಮ ಉಸ್ತುವಾರಿಯಾಗಿ ಗೌತಮ್ ಮೋರೆ, ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ಮೀರಾ ಮೌಸೀನ್ ಅಲಿಖಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.