ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸೇವಾಭೂಷಣ ಪ್ರಶಸ್ತಿ

ಪಿರಿಯಾಪಟ್ಟಣ:ಮಾ:22: ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದ ಸಮಾಜ ಸೇವಕ ಪಟೇಲ್ ನಂಜೇಗೌಡರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅಪಾರ ಸೇವೆ ಸಲ್ಲಿಸಿದ್ದನ್ನು ಮನಗಂಡು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಘದ 101ನೇ ವರ್ಷಾಚರಣೆ ಪ್ರಯುಕ್ತ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಆ.ದೇವೇಗೌಡ, ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್ ಯಮುನಾ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್, ಸರ್ಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ
ಎಚ್.ಕೆ ರಾಮು, ಕೃಷಿ ವಿಜ್ಞಾನಿ ವಸಂತ್ ತಿಮಕಾಪುರ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಮಾಜಸೇವಕ ಪಟೇಲ್ ನಂಜೇಗೌಡ ಅವರು ಪ್ರಶಸ್ತಿಗಳು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚು ಮಾಡಲು ಪ್ರೇರಣೆ ನೀಡಿದ್ದು ನನ್ನೊಂದಿಗೆ ಸಹಕರಿಸಿದ ಹಿತೈಷಿಗಳಿಗೆ ಧನ್ಯವಾದ ತಿಳಿಸಿದರು.