ರಾಜ್ಯೋತ್ಸವ ಪ್ರಶಸ್ತಿಯನ್ನೇ ಧಿಕ್ಕರಿಸಿದ ಸ್ವಾಭಿಮಾನಿ ಫೋಟೊಗ್ರಾಫರ್ ಮಾಧ್ಯಮ ಲೋಕದ ದಿಗ್ಗಜ ಮಾರೂತಿ ಮಾಮಾ ಇನ್ನಿಲ್ಲ

ವಿಶೇಷ ವರದಿ: ಶಿವಕಲುಮಾರ ಸ್ವಾಮಿ

ಬೀದರ: ಮೇ.3:ದೇಶದ ಪ್ರಥಮ ಪ್ರಧಾನಿ ಪಂಡಿತಜವಹರಲಾಲ ನೆಹರು ಅವರ ಹಿಡಿದು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ತನಕ ಎಲ್ಲ ದಿಗ್ಗಜರ ಭಾವಚಿತ್ರ ತೆಗೆದು ಇತಿಹಾಸ ನಿರ್ಮಿಸಿದ ಜಿಲ್ಲೆಯ ಅತ್ಯಂತ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮಾರೋತಿರಾವ ತಾಂದಳೆ(ಮಾಮಾ) ಇಂದು ಇಹಲೋಕ ತ್ಯಜಿಸಿದ್ದಾರೆ.

80ರ ಹಿರಿಯ ಜೀವಿಯಾಗಿದ್ದ ಅವರು ಮಾರ್ಚ್ 22ರಂದು ತುಸು ಕೆಮ್ಮು, ಶೀತದಿಂದ ಬಳಲುತ್ತಿದ್ದರು. ಅಂದು ಬೆಳಿಗ್ಗೆ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿಗೆ ಬಂದು ಕೋವ್ಯಾಕ್ಷಿನ್ ಡೋಸ್ ಕೂಡ ಪಡೆದಿದ್ದರು. ಆದರೆ, ಅದು ಅವರಿಗೆ ಮುಳುವಾಯಿತೇನೊ ಎಂಬಂತೆ ಭಾಸವಾಗುತ್ತಿದೆ. ಲಸಿಕೆ ಪಡೆದ ಮರುದಿನದಿಂದ ತಿವೃಅಸ್ವಸ್ತರಾದಂತೆ ಕಂಡು ಬಂದ ಹಿನ್ನಲೆಯಲ್ಲಿ ಕೂಡಲೇ ವೈದ್ಯರ ಸಲಹೆ ಮೆರೆಗೆ ಬ್ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ದಿನ ಸ್ವಲ್ಪ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ನಮ್ಮ ಪ್ರತಿನಿಧಿ ಶಿವಕುಮಾರ ಸ್ವಾಮಿ ಅವರೊಂದಿಗೆ ದೂರವಾಣಿ ಮೂಖಾಂತರ ಮಾತನಾಡಿ, ಆರೋಗ್ಯವಾಗಿರುವುದಾಗಿ ತಿಳಿಸಿದರು. ಆದರೆ, ಮುರ್ನಾಲ್ಕು ದಿನಗಳಾದ ಬಳಿಕ ಅವರ ಆರೋಗ್ಯದಲ್ಲಿ ಮತ್ತೆ ಏರು, ಪೇರಾದ ಹಿನ್ನಲೆಯಲ್ಲಿ ನಿನ್ನೆಯಷ್ಟೆ ಅವರನ್ನು ವೆಂಟಿಲೇಟರ್‍ಗೆ ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿತಮ್ಮ ಕೈಯಾರೆ ಟೊಮ್ಯಾಟೊ ಸೂಪ್ ಕೊಡಿಸಿ ಧೈರ್ಯ ತುಂಬಿದ್ದರು. ಬೇಗ ಗುಣಮುಖರಾಗಿ ಬನ್ನಿ, ಜಿಲ್ಲಾಡಳಿತ ತಮ್ಮೊಂದಿಗಿದೆ. ಮತ್ತೆ ಕ್ಯಾಮೆರಾ ಹಿಡಿದು ಫೋಟೊ ತೆಗೆಯುವಂತವರಾಗಿರಿ ಎಂದು ಹೇಳಿ ಬಂದಿದ್ದರು. ಆದರೆ, ಇಂದು ಬೆಳಿಗ್ಗೆ ಅವರ ಮಗ ಗೋಪಿ ಅವರ ಬಾಯಿಂದ ಆ ಶಬ್ದ ಕೇಳಿ ಇಡೀ ಸಂಜೆವಾಣಿ ಪರಿವಾರದ ಮೇಲೆ ಆಕಾಶ ಕಳಚಿ ಬಿದ್ದಂತಾಗಿದೆ.

ಲಿಂಗೈಕ್ಯರಾದ ಮಾಮಾ ಅವರು ಪತ್ನಿ ವಿದ್ಯಾವತಿ, ಪುತ್ರ ಗೋಪಿಚಂದ್, ಸೊಸೆ ರೇಣುಕಾ, ಮೊಮ್ಮಕ್ಕಳಾದ ಕು.ಶೃದ್ದಾ, ಸಾಯಿಕುಮಾರ, ಕು.ದಿವ್ಯಾ, ಕು.ಮನಿಷಾ ಸೇರಿದಂತೆ ಅಪಾರ ಬಂಧು, ಮಿತ್ರರನ್ನು ಬಿಟ್ಟು ಅಗಲಿದ್ದಾರೆ.

ಬಾಲ್ಯದಿಂದಲೇ ಮಾಮಾ ಅವರು ಫೋಟೊಗ್ರಾಫಿ ಹವ್ಯಾಸ ಬೆಳೆಸಿಕೊಂಡಿದ್ದರು. ಠಾಕುರ ಬಳಿ ಫೋಟೊಗ್ರಾಫಿ ಕಲಿತು ಅದನ್ನೇ ವೃತ್ತಿಯಾಗಿ ಸ್ವೀಕರಿಸಿದರು. ಇವರು ಬಿ.ಎಸ್.ಸಿ ಪದವಿ ಪಡೆದ ಹಿನ್ನಲೆಯಲ್ಲಿ ಅನೇಕ ಸರ್ಕಾರಿ ಉದ್ಯೋಗಗಳು ಇವರ ಮನೆ ಬಾಗಿಲಿಗೆ ಬಂದರೂ ಅವುಗಳನ್ನು ನಯವಾಗಿಯೇ ತಿರಸ್ಕರಿಸಿದ್ದರು. ಆದರೆ, ಸ್ವಲ್ಪ ದಿವಸ ಶಿಕ್ಷಕರಾಗಿ, ಕಂಪೊಂಡರ್ ಆಗಿ ಕೆಲಸ ಮಾಡಿದ್ದರು. ಅವರ ಸ್ವಾಭಿಮಾನದ ಗುಣವೇ ಅವರನ್ನು ದಿಗಂತಕ್ಕೆ ತಂದು ನಿಲ್ಲಿಸಿತ್ತು.

ಮಾಮಾ ಅವರು ತಮ್ಮ ಜೀವಿತದ ಅವಧಿಯಲ್ಲಿ ಯಾರ ಕೈಯಿಂದ ಹಾರ, ತುರಾಯಿ ಹಾಕಿಕೊಳ್ಳಲಿಲ್ಲ. ಪ್ರಶಸ್ತಿ, ಸನ್ಮಾನಗಳು ಕಂಡರೆ ಹೇದರಿ ಓಡಿ ಹೋಗುತ್ತಿದ್ದರು. ಇಷ್ಟು ನಿಸ್ವಾರ್ಥ ಬದುಕಿಗೆ ಗುರುತಿಸುವ ಕಾರ್ಯ 2019ರಲ್ಲಿ ಅಂಚೆ ಇಲಾಖೆ ಮಾಡಿತು. ಮಾಮಾ ಅವರ ಹೆಸರಿನಲ್ಲಿ ಅಂಚೆ ಲಕೋಟೆ ಹೊರತರುವ ಮೂಲಕ ಐದು ದಶಕಗಳ ಅವರ ಪ್ರಾಮಾಣಿಕ ಸೇವೆಗೆ ಗೌರವ ನೀಡಿರುವುದು ಗಮನಾರ್ಹ.

ತಮ್ಮ ಫೋಟೊಗ್ರಾಫಿ ವೃತ್ತಿಯೊಂದಿಗೆ ಮೊದಲು ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿ ಮಾಧ್ಯಮ ಲೋಕಕ್ಕೆ ಧೂಮುಕಿದ ಅವರು, ನಂತರದ ದಿನಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳಿಗೆ ಫೋಟೊ ಕಳಿಸುವ ಕೆಲಸ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ ಸಂಜೆವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿ ಸೇವೆ ಮುಂದುವರೆಸಿದ್ದರು. ಇತ್ತಿಚೀನ ವರ್ಷಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಜಿಲ್ಲೆಗೆ ಯಾರೊಬ್ಬ ಮಿನಿಸ್ಟರ್‍ಗಳು, ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಬಂದರೂ ಅವರಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗುತ್ತಿತ್ತು. ಇಲ್ಲವೇ ಪ್ರೋಟೊಕಾಲ್ ಬೆಂಗಾವಲು ವಾಹನದಲ್ಲಿ ಮುಂದಿನ ಸೀಟು ಮಾಮಾಗಾಗಿ ಕಾಯುತ್ತಿತ್ತು. ಎಂತಹ ವಿಐಪಿಗಳಿದ್ದರೂ ಅವರ ಮುಂದೆ ದಿಟ್ಟತನ ಪ್ರದರ್ಶಿಸುವ ಔದಾರ್ಯ ಅವರಲ್ಲಿತ್ತು. ಹಾಗಾಗಿಯೇ ಎಲ್ಲ ರಾಜಕಾರಣಿಗಳು ಅವರ ಮುಂದೆ ಎದುರುತ್ತರ ಕೊಡಲು ಹಿಂದೇಟು ಹಾಕುತ್ತಿದ್ದರು. ಹಾಗಂತ ಅವರ ಹತ್ತಿರ ದರ್ಪವೇನಿರಲಿಲ್ಲ. ಸಾಮಾನ್ಯರ ಜೊತೆ ಮೃದುಭಾಷೆಯಿಂದಲೇ ಮಾತನಾಡುತ್ತಿದ್ದರು. ರಾಜಕಾರಣಿಗಳು ಚುನಾವಣೆಗಳು ಸೇರಿದಂತೆ ಇತರೆ ಸಂದರ್ಭದಲ್ಲಿ ಕೊಡುವ ಉಡುಗೊರೆಗಳನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತಿದ್ದರು.

ಒಟ್ಟಾರೆ ಅವರ ಬದುಕಿನುದ್ದಕ್ಕೂ ಸ್ವಾಭಿಮಾನವನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಮಾಮಾ ಅವರಿಗೆ ಕೋರೊನಾ ಮಹಾಮಾರಿ ಇಷ್ಟು ಬೇಗ ಕೊಂಡೊಯುತ್ತದೆ ಎಂದು ಯಾರು ಉಹಿಸಿರಲಿಲ್ಲ. ಕಳೆದ ವರ್ಷ ಕೊರೋನಾ ಕಾಲದಲ್ಲಿ ಎಲ್ಲೆಡೆ ಸುತ್ತಾಡಿ ಫೋಟೊ ತೆಗೆದರೂ ಕೋವಿಡ್ ಅವರ ಬಳಿ ಸುಳಿಯಲಿಲ್ಲ. ಆದರೆ ಈ ವರ್ಷದ ಎರಡನೇ ಅಲೆ ಮಾತ್ರ ಅವರನ್ನು ಕೊಂಡೊಯ್ಯುವ ಮೂಲಕ ಜಿಲ್ಲೆಯ ಮಾಧ್ಯಮ ಲೋಕವನ್ನೇ ಮೌನವಾಗುವಂತೆ ಮಾಡಿದೆ.