ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು

(ಸಂಜೆವಾಣಿ ವಾರ್ತೆ)
ನವಲಗುಂದ,ಅ26 : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದರು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ ಭುವನೇಶ್ವರಿ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪರ ಹೋರಾಟಗಾರರು ಸಾಹಿತಿಗಳು ಎಲ್ಲರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ಗೈರು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪೂರ್ವಬಾವಿ ಸಭೆಗೆ ಹಲವಾರು ಇಲಾಖೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಸಡ್ಡೆ ತೋರಿದ್ದಕ್ಕೆ ತಹಶೀಲ್ದಾರ್ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯವಾಗಿ ತಾಪಂ ಇಓ , ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೆಸ್ಕಾಂ, ನೀರಾವರಿ, ಉಪನೋಂದಣಿ, ಖಜಾನೆ, ಲೋಕೋಪಯೋಗಿ, ಜಿಲ್ಲಾಪಂಚಾಯತ, ಕೃಷಿ, ಸಾರಿಗೆ,ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾಗಿದ್ದರು. ಇನ್ನು ಕೆಲವು ಇಲಾಖೆಯ ನೌಕರರು ಸಭೆ ಮುಗಿಯುವ ವೇಳೆಗೆ ಸಭೆಗೆ ಹಾಜರಾದರೆ , ನೀರಾವರಿ ಇಲಾಖೆಯ ಶಂಕರ ಎಂ ಸಭೆ ಮುಗಿದ ನಂತರ ಆಗಮಿಸಿದರು. ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗದ ಹಾಗೂ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ನಾಗರತ್ನಾ ಕ್ಯಾಸನೂರ, ಗೀತಾ ತೆಗ್ಯಾಳ, ಬಿ ಎಸ್ ಪಾಟೀಲ್, ಡಿ ವಾಯ್ ರಾಯಬಾಗ, ಸುಭಾಸ್ ಮಂಗಳಿ, ಕನ್ನಡಪರ ಹೋರಾಟಗಾರರಾದ ನಬಿಸಾಬ್ ನದಾಫ್, ಸಿರಾಜ್ ಧಾರವಾಡ, ವಿಕ್ರಂ ಕುರಿ, ಸಿದ್ದು ಬಸಾಪುರ, ವಿಜಯ ನಾಗಾವಿ, ಅರುಣಕುಮಾರ ಸುಣಗಾರ, ಉಮೇಶ ನವಲಗುಂದ ಕಂದಾಯ ಇಲಾಖೆಯ ಡಿ ಎನ್ ಪಾಟೀಲ್, ನಾಗರಾಜ್ ಕರಿಸಕ್ರಣ್ಣವರ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.