ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು

ಕಲಬುರಗಿ:ನ.28: ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ವರ್ಷಪೂರ್ತಿ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಾಡಬೇಕು ಎಂದು ಚಿತ್ತಾಪುರಿನ ಕಂಬಳೇಶ್ವರ ಮಠದ ಪೂಜ್ಯ ಸೋಮಶೇಖರ ಶಿವಾಚಾರ್ಯರು ನುಡಿದರು.
ನಗರದ ಕನ್ನಡ ಭವನದ ಸುವರ್ಣಾ ಸಭಾಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಬಿ.ಎಸ್. ಚಂದ್ರಶೇಖರ ಬಣ) ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಅಂಗವಾಗಿ ಕನ್ನಡಿಗರ ಉತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಶ್ರೀಗಳು, ಬ್ಯಾಂಕ್‍ಗಳಲ್ಲಿ ಕನ್ನಡದ ಕಗ್ಗೊಲೆ ನಡೆಯುತ್ತಿದ್ದು, ರಾಜ್ಯದಲ್ಲಿ ಆಡಳಿತ ಕನ್ನಡ ಭಾಷೆ ಆಗಿರುವಾಗ ಇಂಗ್ಲಿಷನಲ್ಲೆ ಚೆಕ್ ಏಕೆ ಬರೆದುಕೊಡಬೇಕು ಎಂದು ಬ್ಯಾಂಕರ್ಸ್‍ಗಳ ಧೋರಣೆಗಳಿಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವರನಾಟ ಡಾ. ರಾಜಕುಮಾರ ಅವರ ದಾರಿಯಲ್ಲಿ ನಡೆದ ಪುನಿತ ಕೂಡ ಕನ್ನಡದ ಮೇರು ನಟರಾಗಿ ಹೊರಹೊಮ್ಮಿದರು. ಬೇರೆ ಬೇರೆ ಭಾಷೆಗಳಲ್ಲಿ ನಟಿಸದೆ ಕನ್ನಡದಲ್ಲಿ ನಟಿಸಿದ್ದೆ ಅವರ ದೊಡ್ಡ ಸಾಧನೆ ಎಂದು ಸ್ಮರಿಸಿದರು. ಕರುನಾಡಲ್ಲಿ ಕನ್ನಡಿಗರೇ ಸಾರ್ವಭೌಮರು, ಕನ್ನಡಿಗರಿಂದ ಕನ್ನಡ ಕಟ್ಟುವ ಕೆಲಸ ಆಗಬೇಕೆ ಹೊರತು ಕುಟ್ಟುವ ಕೆಲಸ ಆಗಬಾರದು ಎಂದು ಕಿವಿಮಾತು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ್, ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚಿನ್ ಫರಹತಾಬಾದ್ ಮಾತನಾಡಿ, ಜಗತ್ತಿನ ನಶಿಸುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಸೇರಿದರೆ ಅಚ್ಚರಿಯೆನ್ನಿಲ್ಲ, ಈಗಲೇ ನಾವೆಲ್ಲರೂ ಎಚ್ಚೆತ್ತುಕೊಂಡು ಕನ್ನಡ ಪ್ರೀತಿಸಿ ಆರಾಧಿಸಬೇಕು ಎಂದು ಸಲಹೆ ನೀಡಿದರು.
ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ
ಭೀಮಾಶಂಕರ ಫಿರೋಜಾಬಾದ್ (ಮಾಧ್ಯಮ), ಭಾಗಮ್ಮ ಆರ್. ಉದನೂರ (ಶಿಕ್ಷಣ), ಆಕಾಂಕ್ಷಾ ಪುರಾಣಿಕ (ನೃತ್ಯ, ಭರತನಾಟ್ಯ), ನಾಗೇಂದ್ರ ಜವಳಿ (ನ್ಯಾಯಾಂಗ), ಎಚ್.ಎಸ್. ಬೇನಾಳ (ಸಾಹಿತ್ಯ) ಅವರರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮಹಾದೇವಪ್ಪ ಕಡೇಚೂರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ್ ಮೂಲಗೆ, ಸಿದ್ದು ಪಾಟೀಲ್, ನಟ ಲಕ್ಷ್ಮೀಕಾಂತ, ಕ-ಕ ಅಧ್ಯಕ್ಷ ಶರಣು ಹೊಸಮನಿ, ಜಿಲ್ಲಾಧ್ಯಕ್ಷ ಆನಂದ ತೆಗನೂರ ಮತ್ತಿತರರು ವೇದಿಕೆ ಮೇಲಿದ್ದರು.


ಗಮನ ಸೆಳೆದ ವೈಷ್ಣವಿ
ಮಿಥುನ ರಾಶಿ ಧಾರವಾಹಿಯ ನಟಿ ವೈಷ್ಣವಿ ಅವರ ಗೀತೆ ಗಾಯನ ಎಲ್ಲರ ಗಮನ ಸೆಳೆಯಿತು. ನೆರೆದ ಪ್ರೇಕ್ಷಕರು ಅವರ ಹಾಡು ಕೇಳಿ ಭಾವ ತುಂಬಿ ಸಂತೃಪ್ತರಾದರು.