ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಯಶವಂತಮಕ್ಕಳಿಂದ ಆಕರ್ಷಕ ಮೆರವಣಿಗೆ, ರಾರಾಜಿಸಿದ ಕನ್ನಡ ಧ್ವಜ

ಕಲಬುರಗಿ:ನ.1: ಇಲ್ಲಿನ ನೆಹರೂ ಗಂಜ್ ಸಮೀಪದ ನಗರೇಶ್ವರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುಕರ್ ಮಾತನಾಡುತ್ತಾ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಮಂತ್ರದಡಿ ಕಾಮನ್ ಮ್ಯಾನ್ ಖ್ಯಾತಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ರಾಜ್ಯದ ದೀನ ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ ಸವಾರ್ಂಗೀಣ ಅಭಿವೃದ್ಧಿಗೆ ಕೆಕೆಆರ್‍ಡಿಬಿಗೆ ಪ್ರಸಕ್ತ 2022-23ನೇ ಸಾಲಿನಲ್ಲಿ ರೂ.3,000 ಕೋಟಿ ಅಮೃತ ಆಯವ್ಯಯ ನೀಡಿದಲ್ಲದೆ ತಲಾ 1,500 ಕೋಟಿ ರೂ. ಗಾತ್ರದ ಮೈಕ್ರೋ ಮತು ಮ್ಯಾಕ್ರೋ ನಿಧಿಯ ಕಾಮಗಾರಿಗಳಿಗೆ ಈಗಾಗಲೆ ಅನುಮೋದನೆ ನೀಡಲಾಗಿದೆ. ಭೌತಿಕವಾಗಿ ಎಲ್ಲ ಕಾಮಗಾರಿಗಳು ಆರಂಭಿಗೊಂಡಿವೆ. ಜೊತೆಗೆ, 2023-24ನೇ ಸಾಲಿಗೆ ರೂ.5,000 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿದ್ದಾರೆ ಎಂದು ನುಡಿದರು.

ತೊಗರಿ ಬೆಳೆಯನ್ನು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಮೂಲಕ ಭೀಮಾ ಪಲ್ಸ್ ಬ್ರಾಂಡ್ ಅಡಿ ಮಾರಾಟ ಮಾಡಲು ಈಗಾಗಲೇ ಮಂಡಳಿಗೆ ಸರಕಾರ ರೂ. 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ಒಂದು ತಿಂಗಳಿನಲ್ಲಿ ಬ್ರಾಂಡೆಡ್ ತೊಗರಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನುಡಿದರು.

ಎಲಿವೇಟ್ ಕಲ್ಯಾಣ ಕರ್ನಾಟಕ

ವಾಣಿಜ್ಯೋದ್ಯಮ ಕ್ಷೇತ್ರವನ್ನು ಉನ್ನತೀಕರಿಸುವ ದೃಷ್ಟಿಯಿಂದ ಸ್ಟಾರ್ಟ್ ಅಪ್ ಕಂಪನಿಗಳನ್ನು ಪ್ರೋತ್ಸಾಹಿಸಲು ‘ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆ’ ಅಡಿ ಈ ಭಾಗದ ಆವಿಷ್ಕಾರಿ ನವೋದ್ಯಮಿಗಳಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಸಹಾಯಾನುದಾನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಡಿಸಿ ಗುರುಕರ್ ತಿಳಿಸಿದರು.

ಜೊತೆಗೆ, ಜಿಲ್ಲೆಯಲ್ಲಿ ಮೆಗಾ ಟೆಕ್ಸ್‍ಟೈಲ್ಸ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1,000 ಎಕರೆ ಪ್ರದೇಶದಲ್ಲಿ ಇದು ತಲೆ ಎತ್ತಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿಯ ಐತಿಹಾಸಿಕ ಕೋಟೆಯನ್ನು ಭಾರತೀಯ ಪುರಾತತ್ವ ಇಲಾಖೆ ಸಹಯೋಗದೊಂದಿಗೆ ಪುನರುಜ್ಜೀರ್ಣಕ್ಕೆ ಪೂರಕವಾಗಿ ಕಲಬುರಗಿ ಮತ್ತು ಬೀದರ್ ಕೋಟೆಗಳ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ.ಯಿಂದ ರೂ.20 ಕೋಟಿ ಅನುದಾನ ನೀಡಲು ಮುಂದೆ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಇನ್ನು ಆಯವ್ಯಯದಲ್ಲಿ ಘೋಷಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಉದ್ಯೋಗಸ್ಥ ಮಹಿಳೆಯರಿಗಾಗಿ ಕಲಬುರಗಿ ನಗರದಲ್ಲಿ ಎರಡು ವಸತಿ ನಿಲಯಗಳನ್ನು ಆರಂಭಿಸಲಾಗಿದೆ. ಜಿಲ್ಲೆಗೆ ಕಳೆದ ಎರಡು ವರ್ಷದಲ್ಲಿ 203 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಇದಕ್ಕಾಗಿ 2,409 ಲಕ್ಷ ರೂ. ಅನುದಾನ ಬಿಡುಗಡೆಯಾಗಿ, ಕಟ್ಟಡಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಆಳಂದ ತಾಲೂಕಿನ ಅಮರ್ಜಾ ಡ್ಯಾಂ ಬಳಿ ರೂ.10 ಕೋಟಿ ವೆಚ್ಚದಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ಹಂಚಿಕೊಂಡರು.

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರದ ರೂ. 6,000 ಜೊತೆಗೆ ರಾಜ್ಯ ಸರಕಾರದ ರೂ.4,000 ಪ್ರೋತ್ಸಾಹ ಧನ ನೀಡುವ ಯೋಜನೆಯಡಿ ಜಿಲ್ಲೆಯ 2.89 ಲಕ್ಷ ರೈತರು ನೋಂದಣಿಯಾಗಿದ್ದು, 2019-20ನೇ ಸಾಲಿನಿಂದ ಈವರೆಗೆ 2.71 ಲಕ್ಷ ರೈತರಿಗೆ 776 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ವಿವರಿಸಿದರು.

ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಜಿಪಂ. ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


ಡೊಳ್ಳು ಬಾರಿಸಿ ಸಂಭ್ರಮಿಸಿದ ಜಾಧವ್

ಕಲಬುರಗಿಯ ನಗರೇಶ್ವರ ಶಾಲೆಯ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಸಂಸದ ಡಾ.ಉಮೇಶ್ ಜಾಧವ್ ಡೊಳ್ಳು ಬಾರಿಸಿ ಸಂಭ್ರಮಿಸಿದರು.

ಶಾಲಾ ಮಕ್ಕಳ ಪರೇಡ್‍ನಲ್ಲಿ ಪಾಲ್ಗೊಂಡಿದ್ದ ಸಂಸದರು ಮಕ್ಕಳೊಂದಿಗೆ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು. ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ನಡೆದ ಮಕ್ಕಳ ಪಥ ಸಂಚಲನ ಆಕರ್ಷಕವಾಗಿತ್ತು.


ಬೆಳೆ ಹಾನಿ: ರೂ.224 ಕೋಟಿ ಪರಿಹಾರ ವಿತರಣೆ

2022-23ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ 10.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಈವರೆಗೆ 8.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ 2021-22ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 50,489 ರೈತರಿಗೆ 55.37 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಡಿಸಿ ಗುರುಕರ್ ಹೇಳಿದರು.

ಇನ್ನೊಂದೆಡೆ, 2022-23 ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 1.70 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 2,48,624 ರೈತರಿಗೆ 224.80 ಕೋಟಿ ರೂ. ದಾಖಲೆಯ ಪರಿಹಾರ ತ್ವರಿತವಾಗಿ ವಿತರಿಸಲಾಗಿದೆ ಎಂದರು.

==

ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದಶಕಗಳ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ 17 ಮತ್ತು ಎಸ್ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎಂದು ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.

==

ಡಿಸಿಸಿ ಬ್ಯಾಂಕ್ ಸಾಧನೆಯ ಗುಣಗಾನ

ಸರಕಾರದ ಸಿದ್ಧಪಡಿಸಿದ ಭಾಷಣವನ್ನು ಓದಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ಇದೇ ವೇಳೆ, ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕ್ ಸಾಧನೆಗಳ ಕುರಿತು ಗುಣಗಾನ ಮಾಡಿದರು.

ಪ್ರಸಕ್ತ 2022-23ನೇ ಸಾಲಿಗೆ 2.60 ಲಕ್ಷ ರೈತರಿಗೆ 1,000 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಈವರೆಗೆ 70 ಸಾವಿರ ರೈತರಿಗೆ 120 ಕೋಟಿ ರೂ. ಸಾಲ ನೀಡಲಾಗಿದೆ. ಜೊತೆಗೆ, ಯಾವುದೇ ಸೌಲಭ್ಯ ಪಡೆಯದ 1,000 ಸ್ವ-ಸಹಾಯ ಗುಂಪುಗಳನ್ನು ಗುರುತಿಸಿ ತಲಾ ರೂ.1 ಲಕ್ಷದಂತೆ ರೂ.10 ಕೋಟಿ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇದರಲ್ಲಿ ಈಗಾಗಲೇ ರೂ.5 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಯಲ್ಲಿ ಕ್ಷೀರ ಉತ್ಪಾದನೆಯ ಸಾಮಥ್ರ್ಯ 40 ಸಾವಿರ ಲೀಟರ್ ಇದ್ದು, ಇದನ್ನು 1 ಲಕ್ಷಕ್ಕೆ ಹೆಚ್ಚಿಸಲು ಡಿ.ಸಿ.ಸಿ ಬ್ಯಾಂಕ್ ಪಣ ತೊಟ್ಟಿದೆ. ಅಲ್ಲದೆ, 750 ಜನರಿಗೆ ಶೇ.3ರ ಬಡ್ಡಿ ದರದಲ್ಲಿ ತಲಾ ರೂ.1.50 ಲಕ್ಷ ನೀಡುವ ಮೂಲಕ ಹೈನುಗಾರಿಕೆ ಹೆಚ್ಚಳಕ್ಕೆ ಮುಂದಾಗಿದೆ. ಇದು ರೈತರ ಆರ್ಥಿಕ ಚೇತರಿಕೆಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

==

ಡಿಸಿ ಭಾಷಣದ ಹೈಲೈಟ್ಸ್

ಕಲಬುರಗಿಯ ಜಾಫರಾಬಾದ್ ಬಳಿ ರೂ. 15 ಕೋಟಿ ವೆಚ್ಚದಲ್ಲಿ ಸರಕಾರಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ 4 ಎಕರೆ ಜಮೀನು ಮೀಸಲು.

ಸಮಾಜ ಕಲ್ಯಾಣ ಇಲಾಖೆಯಿಂದ 2021-22ನೇ ಸಾಲಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ 3,353 ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ರೂ. 670.70 ಲಕ್ಷ ಪ್ರೋತ್ಸಾಹಧನ ಮತ್ತು 42,750 ಮಕ್ಕಳಿಗೆ 859.26 ಲಕ್ಷ ವಿದ್ಯಾರ್ಥಿ ವೇತನ ವಿತರಣೆ.

2021-22ರಿಂದ ಇಲ್ಲಿಯವರೆಗೆ ಅಂತರ್ಜಾತಿ ಮರು ವಿಧವಾ ವಿವಾಹ, ಸರಳ ಮತ್ತು ಸಾಮೂಹಿಕ ಹಾಗೂ ವಿಮುಕ್ತ ದೇವದಾಸಿಯರ ಮಕ್ಕಳ ವಿವಾಹ ಯೋಜನೆಯಡಿ 94 ದಂಪತಿಗಳಿಗೆ ರೂ. 295 ಲಕ್ಷ ಪ್ರೋತ್ಸಾಹಧನ ಹಂಚಿಕೆ.

ಸೇಡಂ ತಾಲೂಕಿನ 1,920 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 68.70 ಕೋಟಿ ರೂ. ವೆಚ್ಚದ ಯಡ್ಡಳ್ಳಿ ಏತ ನೀರಾವರಿ ಯೋಜನೆ ಮತ್ತು 2,185 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 84 ಕೋಟಿ ರೂ. ವೆಚ್ಚದ ತೆರನಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ- ಶೀಘ್ರ ಟೆಂಡರ್ ಆಹ್ವಾನ

ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಈವರೆಗೆ 3,05,969 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಂದ ನೋಂದಣಿ. 2022-23ನೇ ಸಾಲಿನಲ್ಲಿ 2,250 ಕಾರ್ಮಿಕರ ಮಕ್ಕಳ ಮದುವೆಗೆ ರೂ.11.25 ಕೋಟಿ, 6,895 ಕಾರ್ಮಿಕ ಮಕ್ಕಳ ಶೈಕ್ಷಣಿಕ ಧನಸಹಾಯವಾಗಿ ರೂ.4.65 ಕೋಟಿ ಹಾಗೂ 285 ಮಹಿಳಾ ಕಾರ್ಮಿಕರ ಹೆರಿಗೆ ಧನ ಸಹಾಯವಾಗಿ ರೂ.72 ಲಕ್ಷ ವಿತರಣೆ.

ರೂ. 50 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗದ 1000 ವಿದ್ಯಾರ್ಥಿ ಸಾಮಥ್ರ್ಯದ ದೀನದಯಾಳ್ ಉಪಾಧ್ಯಾಯ ಸೌಹಾದರ್À ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ.