ರಾಜ್ಯೋತ್ಸವ, ಜನೋತ್ಸವವಾಗಲಿ

ಬೆಂಗಳೂರು, ನ. ೧- ರಾಜ್ಯದ ಆಡಳಿತದಲ್ಲಿ ಕನ್ನಡ ಭಾಷೆಯ ಪರಿಣಾಮಕಾರಿ ಅನುಷ್ಠಾನದ ಜತೆಗೆ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಒದಗಿಸಲು ಉದ್ಯೋಗ ನೀತಿಯಲ್ಲಿ ಬದಲಾವಣೆ ತರುವುದಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಘೋಷಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ತಮ್ಮ ಆದ್ಯತೆ ಎಂದರು.
ರಾಜ್ಯದಲ್ಲಿ Pಉತ್ತಮ ಆಡಳಿತ ನೀಡಬೇಕು. ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಆಡಳಿತ ಸುಧಾರಣಾ ಸಮಿತಿಯ ಮೊದಲ ವರದಿಯ ಜಾರಿ ಇಂದು ಆಗುತ್ತಿದೆ ಎಂದರು.
ಕನ್ನಡ ರಾಜ್ಯೋತ್ಸವ ಮುಂದಿನ ದಿನಗಳಲ್ಲಿ ಕನ್ನಡಿಗರ ಜನೋತ್ಸವ ಆಗಬೇಕು. ರಾಜ್ಯೋತ್ಸವದಿಂದ ಜನೋತ್ಸವದ ಕಡೆಗೆ ನಮ್ಮ ಪಯಣ ಆರಂಭವಾಗಿದೆ. ಎಲ್ಲರ ಹೆಜ್ಜೆಗಳಿಗೆ ಹೆಜ್ಜೆಗಳಾಗಿ ಭದ್ರ ಕರ್ನಾಟಕ ಕಟ್ಟೋಣ. ವಿಶ್ವದಲ್ಲೇ ಕರ್ನಾಟಕಕ್ಕೆ ಅಗ್ರ ಸ್ಥಾನ ಕೊಡಿಸೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ತಾಯಿ ಭುವನೇಶ್ವರಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಸಕ ರಿಜ್ವಾನ್ ಅಶಾದ್ ಇದ್ದಾರೆ.


ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಬೇಕು. ಆ ನಿಟ್ಟಿನಲ್ಲಿ ಉದ್ಯೋಗ ನೀತಿಯಲ್ಲಿ ಕೆಲ ಬದಲಾವಣೆ ತರುವುದಾಗಿ ಹೇಳಿದರು.
ಉದ್ಯಮ ಆರಂಭಿಸುವವರು ಬಂಡವಾಳ ಎಷ್ಟು ಹಾಕುತ್ತಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನರಿಗೆ ಉದ್ಯೋಗ ನೀಡುತ್ತಾರೆ ಎನ್ನುವುದು ಮುಖ್ಯ. ಅತಿ ಹೆಚ್ಚು ಉದ್ಯೋಗ ಕನ್ನಡಿಗರಿಗೆ ಸಿಗಬೇಕು. ಆ ನಿಟ್ಟಿನಲ್ಲಿ ಉದ್ಯೋಗ ನೀತಿಯಲ್ಲಿ ಕೆಲ ಬದಲಾವಣೆ ತರುವುದಾಗಿ ಹೇಳಿದರು.
ಖಾಸಗಿ, ಸರ್ಕಾರಿ, ಅರೆ ಖಾಸಗಿ ವಲಯದಲ್ಲೂ ಅತಿ ಹೆಚ್ಚು ಉದ್ಯೋಗ ಕನ್ನಡಿಗರಿಗೆ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದರು.
ಕನ್ನಡ ನಮ್ಮ ದೇವರು
ಕನ್ನಡ ಭಾಷೆ ನಮ್ಮ ದೇವರು. ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಭಾಷೆ ಸದೃಢವಾಗಿ ಎಷ್ಟು ಶ್ರೀಮಂತವಾಗುತ್ತೋ ಆ ನಾಡು ಅಷ್ಟೇ ಶ್ರೀಮಂತವಾಗಿ ಇರುತ್ತದೆ. ಕನ್ನಡ ನಮ್ಮ ತಾಯಿ ಬೇರು ಎಂದರು.
ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಕನ್ನಡ ನಮ್ಮ ದೇವರು. ಕನ್ನಡವೆಂಬ ತಾಯಿ ಬೇರನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು.
ಕೋವಿಡ್ ಕಾರಣದಿಂದ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ, ಕನ್ನಡದ ಬಗ್ಗೆ ಯಾರಲ್ಲೂ ಚೈತನ್ಯ ಕಡಿಮೆಯಾಗಿಲ್ಲ. ಕನ್ನಡದ ಮಹತ್ವ, ಪ್ರಯೋಜನ, ಸ್ವಾಭಿಮಾನ ಇಡೀ ಜಗತ್ತಿಗೆ ತಿಳಿಸುವ ಶತಮಾನ ಇದು. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಭಾಷೆ ಬದುಕನ್ನು ರೂಪಿಸುವ ಅಸ್ತ್ರ ಎಂದರು.
ಕನ್ನಡ ಭಾಷೆಗೆ ದೊಡ್ಡ ಇತಿಹಾಸವಿದೆ. ಅತಿ ಪುರಾತನ ಭಾಷೆಗಳಲ್ಲಿ ಕನ್ನಡ ಒಂದು. ಹಿಂದೂ ನಾಗರಿಕತೆಗೂ ಮುನ್ನ ಕನ್ನಡದ ಬಳಕೆ ಇತ್ತು ಎಂಬುದಕ್ಕೆ ಐತಿಹಾಸಿಕ ಕುರುಹುಗಳಿವೆ. ಹಲವು ರಾಜಮನೆತನಗಳು ಕನ್ನಡ ನೆಲ ಆಳಿವೆ. ಆದರೂ ಕನ್ನಡ ಸುದೀರ್ಘವಾಗಿ ಗಟ್ಟಿಯಾಗಿ ನಿಂತಿದೆ. ಸಾಂಸ್ಕೃತಿಕ, ಆಡಳಿತಾತ್ಮಕ ದಾಳಿಗಳನ್ನು ಕನ್ನಡ ಎದುರಿಸಿ ನಿಂತಿದೆ ಎಂದರು.
ಕನ್ನಡಕ್ಕೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ. ಯಾವುದೇ ಬೇರೆ ಶಕ್ತಿ ಕನ್ನಡದ ಶಕ್ತಿಯನ್ನು ಬೇರೆ ಮಾಡಲು ಸೂರ್ಯ, ಚಂದ್ರ ಇರುವವರೆಗೂ ಸಾಧ್ಯವಿಲ್ಲ ಎಂದರು.
ಆಡಳಿತ ಸೇರಿದಂತೆ ಬದುಕಿನ ಎಲ್ಲ ರಂಗಗಳಲ್ಲಿ ಕನ್ನಡಕ್ಕೆ ಸ್ಥಾನ ಕೊಡುವುದು ತಮ್ಮ ಆದ್ಯತೆ ಎಂದು ಅವರು ಹೇಳಿ, ಈ ನಿಟ್ಟಿನಲ್ಲಿ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಯಾವುದೇ ಪ್ರದೇಶ ಹಿಂದುಳಿಯಲು ಬಿಡುವುದಿಲ್ಲ ಎಂದರು.
ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕವನ್ನಾಗಿಸುವ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಹೈದರಾಬಾದ್-ಕರ್ನಾಟಕ ಕಲ್ಯಾಣ ಕರ್ನಾಟಕವಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕಿತ್ತೂರು ಕರ್ನಾಟಕ ಎಂದು ಮುಂಬೈ ಕ ರ್ನಾಟಕಕ್ಕೆ ಹೆಸರಿಡುವ ತೀರ್ಮಾನ ಮಾಡುತ್ತೇವೆ ಎಂದರು.
ಮುಂಬೈ ಕರ್ನಾಕದ ಹೆಸರು ಮಾತ್ರ ಬದಲಾವಣೆ ಮಾಡಲ್ಲ ಆ ಭಾಗದ ಜನರ ಬದುಕು ಹಸನಾಗಬೇಕು. ಆ ನಿಟ್ಟಿನಲ್ಲಿ ಎಲ್ಲ ಪ್ರದೇಶಗಳ ಅಭಿವೃದ್ಧಿ ಮಾಡುವುದಾಗಿ ಹೇಳಿದರು.
ಮುಂದಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ೩ ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುತ್ತೇವೆ. ಹಾಗೆಯೇ ಮೈಸೂರು ಭಾಗದ ನೀರಾವರಿ ಯೋಜನೆಗಳು, ಕೃಷ್ಣ ಜಲಾನಯನ ಪ್ರದೇಶಗಳ ಅಭಿವೃದ್ಧಿ ಮಾಡುತ್ತೇವೆ ಎಂದರು.
ಶಿಕ್ಷಣದಲ್ಲೂ ಕನ್ನಡ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಕನ್ನಡದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ವಿಜ್ಞಾನ, ಕಲೆ, ಗಣಿತ ಎಲ್ಲ ವಿಭಾಗಗಳಲ್ಲೂ ಪ್ರಾಥಮಿಕ ಹಂತದಿಂದ ಪದವಿವರೆಗೆ ಉತ್ತಮ ಶಿಕ್ಷಣ ನೀಡಿ ಕನ್ನಡದ ಯುವ ಸಮೂಹಕ್ಕೆ ಉದ್ಯೋಗ ಕೊಡಿಸುವ ಕೆಲಸ ಆಗಬೇಕು. ಆಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ತಾಂತ್ರಿಕ ಶಿಕ್ಷಣ ಸೇರಿದಂತೆ ಎಲ್ಲೆಡೆ ಶಿಕ್ಷಣದ ಉನ್ನತೀಕರಣ ಮುಂದುವರೆದಿದೆ. ನೂತನ ಶಿಕ್ಷಣ ನೀತಿಯಲ್ಲೂ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ವಲಯದಲ್ಲಿ ಕನ್ನಡ ಪ್ರಥಮ ಭಾಷೆ ಇದೆ. ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡುವ ನಿರ್ಧಾರ ಮಾಡಿದ್ದೇವೆ ಎಂದರು.
ಸರಳ ಆಚರಣೆ
ಕೋವಿಡ್ ಕಾರಣದಿಂದ ಕನ್ನಡ ರಾಜ್ಯೋತ್ಸವವನ್ನು ಇಂದು ಸರಳವಾಗಿ ಆಚರಿಸಲಾಗಿದ್ದು, ಈ ವರ್ಷವೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಆಹ್ವಾನಿತರಿಗಷ್ಟೇ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ನಟ ಪುನೀತ್ ರಾಜ್‌ಕುಮಾರ್ ರವರ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಸಕ ರಿಜ್ವಾನ್ ಹರ್ಷದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗ ನಾಮಕರಣ ಮಾಡಿದ ನಂತರ ಈಗ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವನ್ನಾಗಿ ನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ.
ಕಂಠೀಕರಣ ಕ್ರೀಡಾಂಗಣದಲ್ಲಿಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮುಂಬೈ-ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವುದಾಗಿ ಹೇಳಿದರು.

ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬೇಡಿಕೆ ಬಗ್ಗೆ ಪ್ರಮುಖರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಂಠೀರಣ ಕ್ರೀಡಾಂಗಣದಲ್ಲಿಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬ ಅಭಿಮಾನಿಗಳ ಬೇಡಿಕೆಯನ್ನು ಗಮನಿಸಿದ್ದೇನೆ. ಈ ಬೇಡಿಕೆ ಕುರಿತು ತಕ್ಷಣದಲ್ಲಿ ಏನನ್ನೂ ಹೇಳಲಾಗದು. ಎಲ್ಲ ಪ್ರಮುಖರ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಸಿಂದಗಿ ಮತ್ತು ಹಾನಗಲ್ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ. ನಾಳೆ ಫಲಿತಾಂಶ ಬಿಜೆಪಿ ಪರವಾಗಿರಲಿದೆ ಎಂದು ಅವರು ಹೇಳಿದರು.