ರಾಜ್ಯೋತ್ಸವದ ಗೌರವಧನ 1 ಲಕ್ಷ ಸಮಾಜಕ್ಕೆ ನೀಡಿದ ಧಂಗಾಪೂರರಿಗೆ ಅಂಬಲಗಿ ಸನ್ಮಾನ

ಕಲಬುರಗಿ,ನ.19- ರೈತರ ಪರವಾಗಿ ಕಳೆದ 3 ದಶಕಗಳಿಂದ ಸತತ ದುಡಿಯುತ್ತಿರುವ ಹಾಗೂ ಸಾಮಾಜಿಕ, ಧಾರ್ಮಿಕ, ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಅವರು, ತಮಗೆ ಸಿಕ್ಕಿರುವ ರಾಜ್ಯೋತ್ಸವ ಪ್ರಶಸ್ತಿಯ 1 ಲಕ್ಷ ರೂ.ಗಳನ್ನು ಸಮಾಜಕ್ಕಾಗಿ ನೀಡಿರುವುದು ಅತ್ಯಂತ ಸ್ವಾಗತ ಹಾಗೂ ಶ್ಲಘನೀಯ ಎಂದು ಪ್ರೊ.ಎಂ.ಬಿ.ಅಂಬಲಗಿ ಅವರು ಎಂದು ಹೇಳಿದರು.
ಈಶಾನ್ಯ ವಲಯದ ಶಿಕ್ಷಕರ ವೇದಿಕೆವತಿಯಿಂದ ಪ್ರಶಸ್ತಿ ಪುರಸ್ಕøತ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರಶಸ್ತಿಯ 1 ಲಕ್ಷ ರೂ.ಗಳ ಗೌರವಧನವನ್ನು ರೈತರ ಪರಿಹಾರಕ್ಕಾಗಿ ಸರಕಾರಕ್ಕೆ 50 ಸಾವಿರ ತಮ್ಮ ಹುಟ್ಟೂರಿನ ಧಂಗಾಪೂರ ದೇವಸ್ಥಾನಕ್ಕೆ 50 ಸಾವಿರ ದೇಣಿಗೆ ನೀಡಿರುವುದು ಮಾದರಿ ಕೆಲಸವಾಗಿದೆ ಎಂದರು.
ಧಂಗಾಪೂರರವರನ್ನು ಶಾಲು ಹೊದಿಸಿ ರುಮಾಲು ಕಟ್ಟಿ ಸನ್ಮಾನಿಸಿ ಮಾತನಾಡಿದ ಅಂಬಲಗಿ ಅವರು, ಕೃಷಿ ಕ್ಷೇತ್ರದಲ್ಲಿ ಮಾಡಿರುವ ಕಾರ್ಯವನ್ನು ಸರ್ಕಾರ ಗುರುತಿಸಿ ವಿಧಾನ ಪರಿಷತ್‍ಗೆ ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.
ಹಿರಿಯರಾದ ಇವರ ಮಾರ್ಗದರ್ಶನದಲ್ಲಿ ತಮ್ಮ ಹೊಲದಲ್ಲಿ 20 ವರ್ಷಗಳಿಂದ ಸಾಗುವಾನಿ, ಬಿದಿರು, ಬೇವು, ಮುಂತಾದ ಅರಣ್ಯ ಬೆಳೆಗಳ ಜೊತೆಗೆ ಹಣ್ಣಿನ ಗಿಡಗಳು ಬೆಳೆಯುತ್ತಿದ್ದೇನೆ. ಇವರ ಮಾರ್ಗದರ್ಶನ ರೈತರಿಗೆ ಅವಶ್ಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ರಾಮಪ್ಪ ಪಾಟೀಲ ಧಂಗಾಪೂರರವರು, ನನ್ನ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ ಸರಕಾರಕ್ಕೆ ಅಭಿನಂದಿಸಿ ಜೊತೆಗೆ ರೈತರು ನನ್ನ ಬಗ್ಗೆ ಇಟ್ಟಿರುವ ಗೌರವಕ್ಕೆ ರುಣಿಯಾಗಿದ್ದೇನೆ. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು ಮತ್ತು ಬ್ಯಾಂಕನವರು ಬೆಳೆಗೆ ಸಾಕಾಗುವಷ್ಟು ಬಡ್ಡಿರಹಿತ ಸಾಲ ನೀಡಬೇಕು. ಆಗ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೀರೇಂದ್ರ ಪಾಟೀಲ ಕುಮಸಿ, ಡಾ. ರಾಜೇಂದ್ರ ಯರನಾಳೆ, ಡಾ. ಸಿದ್ರಾಮಯ್ಯ ಮಠ, ಡಾ. ಶಿವಶರಣಪ್ಪ ಧಾಬಾ, ರಾಘವೇಂದ್ರ ಕಲ್ಯಾಣಕರ್, ಗುರುಪ್ರಸಾದ ಅಂಬಲಗಿ ಸೇರಿದಂತೆ ಇತರರು ಉಪಸ್ತಿತರಿದ್ದರು.