ರಾಜ್ಯಾದ್ಯಂತ ಹನುಮಾನ್ ಚಾಲಿಸ ಪಠಣೆ

ಬೆಂಗಳೂರು,ಮೇ ೪:ಬಜರಂಗ ದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದನ್ನು ವಿರೋಧಿಸಿ ಹಾಗೂ ಈ ಪ್ರಸ್ತಾವದ ವಾಪಸ್ಸಾತಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಇಂದು ರಾಜ್ಯಾದ್ಯಂತ ಹನುಮಾನ್ ಚಾಲೀಸ್ ಪಠಿಸುವಂತೆ ಕರೆ ನೀಡಿದೆ.
ಕಾಂಗ್ರೆಸ್ ಪಕ್ಷವು ೨೦೨೩ರ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧಿಸುವ ಅಂಶವನ್ನು ಪ್ರಕಟಿಸಿರುವುದು ಎಲ್ಲ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಸಮಾಜದ ಹಿತಕ್ಕೆ ಆತಂಕಕಾರಿಯಾಗಿದೆ. ಇದರ ವಿರುದ್ಧ ಇಂದು ರಾತ್ರಿ ೭ ಗಂಟೆಗೆ ಹನುಮಾನ್ ಚಾಲೀಸ್ ಪಠಣ ಕಾರ್ಯಕ್ರಮವನ್ನು ನಡೆಸುವಂತೆ ಕಾರ್ಯಕರ್ತರಿಗೆ ಹಾಗೂ ಹಿಂದೂ ಬಂಧುಗಳಿಗೆ ಕರೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರಿ ಮತ್ತು ಬಜರಂಗ ದಳದ ಪ್ರಾಂತ ಸಂಯೋಜಕ ಸುನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಪರಿಷತ್‌ನ ಕಾರ್ಯಕರ್ತರುಗಳು ತಮ್ಮ ತಮ್ಮ ಮನೆಯಲ್ಲಿ, ಊರುಗಳಲ್ಲಿ, ಬಡಾವಣೆಗಳಲ್ಲಿ ಮತ್ತು ಆಯ್ದ ಅನುಕೂಲಕರ ಸ್ಥಳಗಳಲ್ಲಿ ಎಲ್ಲರೂ ಸೇರಿ ಹನುಮಾನ್ ಚಾಲೀಸ್‌ನ್ನು ಪಠಣ ಮಾಡಲು ಅವರು ಮನವಿ ಮಾಡಿದ್ದಾರೆ.