ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ

ಪಲ್ಸ್ ಪೋಲಿಯೊ ಅಭಿಯಾನದ ಪ್ರಯುಕ್ತ ಮಗುವಿಗೆ ಪೋಲಿಯೊ ಡ್ರಾಪ್ ಹಾಕಲಾಯಿತು.

ಬೆಂಗಳೂರು, ಮಾ.೩-ಜೀವನಕ್ಕಾಗಿ ಎರಡು ಹನಿ ಎಂಬ ಧ್ಯೇಯದೊಂದಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮೊದಲನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಯಿತು.ಭಾನುವಾರ ದಿನಪೂರ್ತಿ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ರೈಲು ನಿಲ್ದಾಣ, ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ, ವಿವಿಧ ಬಡಾವಣೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ದೇಗುಲ, ಸಮುದಾಯ ಭವನಗ ಳಲ್ಲಿ ಪೋಲಿಯೋ ಕೇಂದ್ರಗಳನ್ನು ತೆರೆದು ಲಸಿಕೆ ಹಾಕುತ್ತಿದ್ದ ದೃಶ್ಯ ಕಂಡಿತು.ರಾಷ್ಟ್ರೀಯ ಲಸಿಕಾ ದಿನಾಚರಣೆ ಭಾನುವಾರ ನಡೆಯುವ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ತಪ್ಪದೇ ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದು ವೈದ್ಯರು, ಆರೋಗ್ಯ ಸಿಬ್ಬಂದಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ಪೋಲಿಯೊ ವೈರಸ್ ಅನ್ನು ತಡೆಗಟ್ಟಲು ನವಜಾತ ಶಿಶುವಿನಿಂದ ಐದು ವರ್ಷದೊಳಗಿನ ಪ್ರತಿ ಮಗುವಿಗೂ ಪಲ್ಸ್ ಪೋಲಿಯೊ ಲಸಿಕೆಯನ್ನು ನೀಡಲಾಗುತ್ತದೆ. ಈ ಲಸಿಕೆಯನ್ನು ದೇಶದೆಲ್ಲೆಡೆ ಒಂದೇ ದಿನ ಒಂದೇ ಬಾರಿಗೆ ಹಾಕುವುದರಿಂದ ಪೋಲಿಯೊ ರೋಗಾಣುವನ್ನು ನಾಶ ಮಾಡಲು ಸಹಕಾರಿಯಾಗುತ್ತದೆ ಎನ್ನುವ ಸಂದೇಶ ಅನೇಕ ಕಡೆಗಳಲ್ಲಿ ಕಂಡಿತು.ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ನವೀನ್ ಭಟ್, ಪೋಲಿಯೊ ಪಸರಿಸುವಿಕೆಯು ಇಂದಿಗೂ ಜಗತ್ತಿನಾದ್ಯಂತ ಮಕ್ಕಳನ್ನು ಬಾಧಿಸುತ್ತಿದೆ. ಇದರಲ್ಲಿ ಭಾರತದ ನೆರೆ ರಾಷ್ಟ್ರಗಳೂ ಸೇರಿರುವುದು ಭಾರತಕ್ಕೆ ಕಳವಳಕಾರಿಗಿದೆ.ಹೀಗಾಗಿ ಪೋಲಿಯೊ ನಿರ್ಮೂಲನೆ ಸ್ಥಿತಿಯನ್ನು ಭಾರತ ಕಾಯ್ದುಕೊಳ್ಳುಬೇಕಿದ್ದು, ೫ ವರ್ಷದೊಳಗಿನ ಎಲ್ಲಾ ಮಕ್ಕಳನ್ನು ವ್ಯಾಪ್ತಿಗೊಳಪಡಿಸಿದಂತೆ ರಾಷ್ಟ್ರೀಯ ಪೋಲಿಯೊ ಲಸಿಕಾ ಅಭಿಯಾನವನ್ನು ಮಾರ್ಚ್ ೩ ರಿಂದ ೬ ರ ವರೆಗೆ ಹಮ್ಮಿಕೊಳ್ಳಲಾಗಿದೆ.ಮೊದಲನೇ ದಿನ ಭಾನುವಾರ ಪೋಲಿಯೊ ಬೂತ್‌ಗಳಲ್ಲಿ ಹಾಗೂ ನಂತರದ ೨ – ೩ ದಿನಗಳಲ್ಲಿ ಮನೆ-ಮನೆ ಭೇಟಿಯ ಮೂಲಕ ೦-೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ೨ ಹನಿ ಪೋಲಿಯೊ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವಲಸಿಗ ಸಮುದಾಯದ, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಹೇಳಿದರು.ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಪ್ರತಿ ಶಿಶುವಿಗೆ ೫ ವರಸೆ ಒಪಿವಿ(ಓರಲ್ ಪೋಲಿಯೊ ವ್ಯಾಕ್ಸಿನ್) ಮತ್ತು ೩ ವರಸೆ ಐಪಿವಿ(ಇನ್‌ಜಕ್ಟಬಲ್ ಪೋಲಿಯೊ ವ್ಯಾಕ್ಸಿನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗುವು ಲಸಿಕೆಯಿಂದ ವಂಚಿತರಾಗದಂತೆ ಅಂದಾಜು ೬೨ ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಗುರಿ ಹೊಂದಲಾಗಿದೆ ಎಂದರು.ಸುಮಾರು ೩೩೭೧೨ ಪೋಲಿಯೊ ಬೂತ್ ಗಳನ್ನ ತೆರೆಯಲಾಗಿದ್ದು, ೧೧೧೩೭೦ ಲಸಿಕಾ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. ೯೬೩ ಸಂಚಾರಿ ತಂಡಗಳನ್ನ ರಚಿಸಲಾಗಿದ್ದು, ೭೨೦೬ ಮೇಲ್ವಿಚಾರಕರನ್ನ ನಿಯೋಜಿಸಲಾಗಿದೆ. ಈ ಹಿಂದೆ ಎಷ್ಟು ಬಾರಿ ಪೋಲಿಯೊ ಲಸಿಕೆ ಪಡೆದಿದ್ದರೂ ಸಹ ಈ ಅಭಿಯಾನದಲ್ಲಿ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕವಾಗಿದೆ ಎಂದು ವಿವರಿಸಿದರು.

“ಪೋಲಿಯೊ ನಿರ್ಮೂಲನೆ ಮುಖ್ಯ”

ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದನ್ನ ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ.

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ