ರಾಜ್ಯಾದ್ಯಂತ ಜಾತ್ರೆ ನಿಷೇಧ: ನಡೆದರೆ ಜಿಲ್ಲಾಧಿಕಾರಿಗಳೇ ಹೊಣೆ: ಅಶೋಕ್ ಎಚ್ಚರಿಕೆ

ಬೆಂಗಳೂರು, ಏ.17- ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಒಂದು ವೇಳೆ ಜಾತ್ರೆಗಳು ನಡೆದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಜಾತ್ರೆಗಳಾದರೆ ತಹಶೀಲ್ದಾರ್ ಅವರೇ ಹೊಣೆ‌ ಹೊರಬೇಕಾಗುತ್ತದೆ ಎಂದು ತಿಳಿಸಿದರು.
ಕೊರೊನಾ ಹತೋಟಿಗೆ ತರಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಜನರನ್ನು ನಿಯಂತ್ರಿಸದಿದ್ದರೆ ಎಫ್ ಐಆರ್ ದಾಖಲಿಸಲಾಗುವುದು.ಹೆಚ್ಚವರಿ ಪಾಸ್ ವಿತರಿಸಿದ್ದರೆ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ತಾಕೀತು ಮಾಡಿದರು.
ಗೃಹ ಸಚಿವ ಬೊಮಾಯಿ ಮಾತನಾಡಿ, ಕಲ್ಯಾಣ ಮಂಟಪ ಬುಕ್ ಮಾಡುವ ವೇಳೆ ಜಿಲ್ಲಾಧಿಕಾರಿ ಗಳಿಂದ ಅನುಮತಿ ಕಡ್ಡಾಯ.ಜಿಲ್ಲಾಡಳಿತ ನಿಗದಿತ ಸಂಖ್ಯೆಯ ಪಾಸ್‌ ವಿತರಿಸಲಿದೆ. ಈಗಾಗಲೇ ಬುಕ್‌ ಮಾಡಿದ್ದರೆ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸೋಂಕು ನಿಯಂತ್ರಿಸಲು ಏ. 19 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಗರದ ಸಂಸದರು ಶಾಸಕರು ಮತ್ತು ಅಧಿಕಾರಿಗಳ ಜತೆ ಸಂವಾದ ನಡೆಸಲಿದ್ದಾರೆ ಎಂದರು.
ಸಚಿವ ಸುಧಾಕರ್ ಮಾತನಾಡಿ, 7,500 ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿರದರು.