ರಾಜ್ಯಾದ್ಯಂತ ಜನಜೀವನ ಸ್ತಬ್ಧ

Were to go.........More people are watting at railway station

ಬೆಂಗಳೂರು,ಏ.೩೦- ಕೊರೊನಾ ತಡೆಗೆ ರಾಜ್ಯಾದ್ಯಂತ ಜಾರಿ ಮಾಡಿರುವ ಲಾಕ್‌ಡೌನ್‌ನ ೩ನೇ ದಿನವಾದ ಇಂದು ರಾಜ್ಯಾದ್ಯಂತ ಜನಜೀವನ ಸ್ತಬ್ಧಗೊಂಡಿದೆ. ಎಲ್ಲ ರೀತಿಯ ಚಟುವಟಿಕೆಗಳು ಬಂದ್ ಆಗಿದ್ದು, ಅಗತ್ಯ ಸೇವೆಯ ವಾಹನಗಳನ್ನೊರತುಪಡಿಸಿ ಉಳಿದೆಲ್ಲ ವಾಹನಗಳ ಸಂಚಾರವು ಬಂದ್ ಆಗಿವೆ.
ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಅಘೋಷಿತ ಬಂದ್‌ನ ಪರಿಸ್ಥಿತಿ ಇಂದೂ ಸಹ ಮುಂದುವರೆದಿದೆ. ರಸ್ತೆಗಳಲ್ಲೂ ವಾಹನಗಳ ಓಡಾಟ ವಿರಳವಾಗಿದ್ದು, ಬಹುತೇಕ ಜನ ಸಂಚಾರವೂ ಸ್ತಬ್ಧಗೊಂಡಿದೆ.
ಕರ್ಫ್ಯೂ ಕಾರಣ ಬಹುತೇಕ ಜನರು ಮನೆಯಲ್ಲೇ ಉಳಿದಿದ್ದು, ಅಗತ್ಯ ಮತ್ತು ತುರ್ತು ಸೇವೆಗಳಲ್ಲಿರುವವರು ಮಾತ್ರ ಓಡಾಡುತ್ತಿದ್ದಾರೆ.
ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ. ವಾಹನಗಳು ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ. ಪ್ರಮುಖ ರಸ್ತೆಗಳು ಜಿಲ್ಲಾ ಗಡಿಗಳಲ್ಲಿ ಪೊಲೀಸರು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಅನಗತ್ಯವಾಗಿ ಓಡಾಡುವವರ ಮೇಲೆ ನಿಗಾ ವಹಿಸಿದ್ದಾರೆ. ಹಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದು, ಕೆಲ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಖರೀದಿಗೆ ಮುಗಿ ಬಿದ್ದ ಜನ
ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿ ಬಿದ್ದಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪಟ್ಟಣಗಳಲ್ಲಿ ಜನ ಸಾಮಾಜಿಕ ಅಂತರ ಎಲ್ಲವನ್ನೂ ಗಾಳಿಗೆ ತೂರಿ ಅವಶ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು. ಅದರಲ್ಲೂ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದುದು ಕಂಡುಬಂತು.
ಅವಶ್ಯ ವಸ್ತುಗಳ ಖರೀದಿ ಸಮಯದಲ್ಲಿ ರಸ್ತೆಗಳಲ್ಲಿ ವಾಹನಗಳ ಸಂಚಾರ, ಜನರ ಓಡಾಟವೂ ಹೆಚ್ಚಿತ್ತು. ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಜನ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಓಡಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಬೆಳಿಗ್ಗೆ ೧೦ರ ನಂತರ ಪೊಲೀಸರು ಕೆಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಜನರ ಓಡಾಟಕ್ಕೂ ನಿರ್ಬಂಧ ಹೇರಿ ಕರ್ಫ್ಯೂವನ್ನು ಜಾರಿ ಮಾಡುವ ಮೂಲಕ ಜನ ಮತ್ತು ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದರು.

ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ಬೆಂಗಳೂರು ನಗರ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಭಾರೀ ಜನಸಂದಣಿ ಕಂಡುಬಂದಿತು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಸಾಮಾಜಿಕ ಅಂತರ ಮಾಯವಾಗಿತ್ತು. ಲಾಕ್‌ಡೌನ್ ಜಾರಿಯಿಂದಾಗಿ ಕೆಲಸವಿಲ್ಲದೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.