ರಾಜ್ಯಸಭೆ ಚುನಾವಣೆ ನಾರಾಯಣ್ ನಾಮಪತ್ರ ಸಲ್ಲಿಕೆ

ಬೆಂಗಳೂರು, ನ. ೧೮- ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ನಿಧನದಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಡಿ. ೧ ರಂದು ನಡೆಯುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಉದ್ಯಮಿ ಕೆ. ನಾರಾಯಣ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದರು.
ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್ ಜತೆ ಆಗಮಿಸಿದ ಕೆ. ನಾರಾಯಣ ಅವರು ಚುನಾವಣಾಧಿಕಾರಿಯಾಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಗೆ ಇರುವ ಶಾಸಕರ ಸಂಖ್ಯಾಬಲದ ಮೇಲೆ ಬಿಜೆಪಿ ಈ ಉಪಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದ್ದು, ಕೆ. ನಾರಾಯಣ ಅವರು ಅವಿರೋಧವಾಗಿ ಆಯ್ಕೆ ಆಗುವ ಸಾಧ್ಯತೆಗಳಿವೆ.
ಈ ಉಪಚುನಾವಣೆಗೆ ಇಂದು ೩ ಗಂಟೆಯವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಮಧ್ಯಾಹ್ನ ೨ ಗಂಟೆವರೆಗೂ ನಾರಾಯಣ ಅವರನ್ನು ಬಿಟ್ಟರೆ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ ಬಹುತೇಕ ಇವರ ಆಯ್ಕೆ ಅವಿರೋಧವಾಗಲಿದೆ.
ನಾಮಪತ್ರಗಳ ಪರಿಶೀಲನೆ ನಾಳೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಈ ತಿಂಗಳ ೨೩ ಕೊನೆಯ ದಿನವಾಗಿದೆ.
ಅಶೋಕ ಗಸ್ತಿಯವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಅವರ ಪತ್ನಿಗೆ ಟಿಕೆಟ್ ಸಿಗಬಹುದು ಎಂದು ಹೇಳಲಾಗಿತ್ತಾದರೂ ಪಕ್ಷದ ವರಿಷ್ಠರು ಅಚ್ಚರಿ ಎಂಬಂತೆ ಉದ್ಯಮಿ ಕೆ. ನಾರಾಯಣ ಅವರ ಆಯ್ಕೆಯನ್ನು ನಿನ್ನೆ ಅಂತಿಮಗೊಳಿಸಿದ್ದರು.
ಆರ್‌ಎಸ್‌ಎಸ್ ಹಿನ್ನೆಲೆ ಹೊಂದಿರುವ ಕೆ.ನಾರಾಯಣ ಅವರು ಮೂಲತಃ ಮಂಗಳೂರಿನವರಾಗಿದ್ದು, ನಗರದಲ್ಲಿ ಪ್ರಕಾಶನ ಮತ್ತು ಮುದ್ರಣ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.
ದೇವಾಂಗ (ನೇಕಾರ) ಸಮಾಜಕ್ಕೆ ಸೇರಿದ ನಾರಾಯಣ ಅವರು ಕಳೆದ ೫ ದಶಕಗಳಿಂದ ಬಿಜೆಪಿಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನ ಜತೆಗೆ ಇವರಿಗೆ ನಿಕಟ ಸಂಬಂಧ ಇದ್ದು, ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.