ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನವಾದರೆ ಶಾಸಕ ಸ್ಥಾನಕ್ಕೆ ಕುತ್ತು: ಸಚಿವ ಎಂ.ಬಿ. ಪಾಟೀಲ

ವಿಜಯಪುರ,ಫೆ.25-ರಾಜ್ಯಸಭಾ ಚುನಾವಣೆಯಲ್ಲಿ ಬಹಿರಂಗ ಮತದಾನ ಇರುತ್ತದೆ. ಅಡ್ಡ ಮತದಾನ ಆಗಲ್ಲ. ಮತದಾನ ಮಾಡಿದ್ದನ್ನು ತೋರಿಸಲಾಗುತ್ತದೆ. ಹಾಗೊಂದು ವೇಳೆ ಅಡ್ಡ ಮತದಾನ ಮಾಡಿದರೆ ಶಾಸಕತ್ವ ರದ್ದಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಇಂದು ನಗರ ಹೊರ ವಲಯದ ಭೂತನಾಳ ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಥ ಸಾಹಸಕ್ಕೆ ಯಾರೂ ಕೈ ಹಾಕಲ್ಲ. ಅದಕ್ಕೂ ತಾಕತ್ ಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಕಮ್ಯುನಲ್ ಮತ್ತು ಕ್ರಿಮಿನಲ್ ಪಕ್ಷ ಎಂಬ ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆಂಬುದನ್ನು ಅವರು ಮರೆತಿದ್ದಾರೆ ಎಂದು ಕುಟುಕಿದರು.
ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೋಭಕ್ಕ ಅದೇ ಗುಂಗಲ್ಲಿರುತ್ತಾರೆ.
ಜನ ನಮಗೆ 135 ಸೀಟ್ ಕೊಟ್ಟಿದ್ದಾರೆ. ಆಪರೇಶನ್ ಕಮಲ ಮಾಡುತ್ತೆನೆಂದರೂ ಕನಿಷ್ಟ 50 ಜನ ಶಾಸಕರು ಹೋಗಬೇಕು. ಈ ಮೂಲಕ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಅಬಾಧಿತ ಎಂದರು.
ಇನ್ನು ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಕ್ಷೇತ್ರದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆಂದು ಟಾಂಗ್ ನೀಡಿದರು.