ರಾಜ್ಯಸಭೆಯ 12 ಸದಸ್ಯರ ಸಸ್ಪೆಂಡ್ ವಾಪಸ್ಸಾತಿಗೆ ಖರ್ಗೆ ಆಗ್ರಹ

ನವದೆಹಲಿ,ಡಿ.೧- ರಾಜ್ಯಸಭೆಯ ೧೨ ಸದಸ್ಯರನ್ನು ಅಮಾನತು ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸಂಸತ್ ಭವನದ ಮುಂಭಾಗದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಂಬಂಧ ವಿರೋಧ ಪಕ್ಷಗಳ ಎಲ್ಲ ನಾಯಕರು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

೧೨ ಸದಸ್ಯರನ್ನ ಅಮಾನತು ಮಾಡಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಸಭಾಪತಿ ವೆಂಕಯ್ಯನಾಯ್ಡು ಅವರಿಗೂ ಲಿಖಿತವಾಗಿ ಪತ್ರ ಬರೆಯಲಾವಗಿದೆ. ಕೇಂದ್ರ ಸರ್ಕಾರ ಈ ಸಂಬಂಧ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ೧೨ ಸದಸ್ಯರನ್ನು ಪ್ರಸ್ತುತ ಚಳಿಗಾಲದ ಅಧಿವೇಶನ ಪೂರ್ಣಗೊಳ್ಳುವ ತನಕ ಅಮಾನತು ಮಾಡಲಾಗಿದೆ . ಈ ಪ್ರಕ್ರಿಯೆ ಕೂಡಲೇ ವಾಪಸ್ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಂಗಾರು ಅಧಿವೇಶನದ ಕಡೆದ ದಿನದ ಘಟನೆಯನ್ನು ಮುಂದಿಟ್ಟುಕೊಂಡು ಚಳಿಗಾಲದ ಅಧಿವೇಶನದ ಮೊದಲ ದಿನ ಕ್ರಮ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಹಿರಿಯ ನಾಯಕರು ಪಾಲ್ಗೊಂಡಿದ್ದರು.