ರಾಜ್ಯಸಭೆಗೆ ಸೋನಿಯಾ

ಜೈಪುರ,ಫೆ.೧೪:ನಿರೀಕ್ಷೆಯಂತೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜಸ್ತಾನದಿಂದ ಇಂದು ನಾಮಪತ್ರ ಸಲ್ಲಿಸಿದರು. ೨೦೧೯ರಲ್ಲೇ ಇದು ತಮ್ಮ ಕೊನೆಯ ಲೋಕಸಭಾ ಚುನಾವಣೆ ಎಂದು ಘೋಷಿಸಿದ್ದರು. ಈ ಬಾರಿ ಇದೇ ಮೊದಲ ಬಾರಿಗೆ ರಾಜ್ಯಸಭೆಯ ಅಖಾಡಕ್ಕೆ ಧುಮುಕಿದ್ದಾರೆ.
ದೆಹಲಿಯಿಂದ ನೇರವಾಗಿ ಜೈಪುರ ವಿಧಾನಸಭೆಗೆ ಆಗಮಿಸಿದ ಸೋನಿಯಾ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಪುತ್ರ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಗಾಂಧಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ಸತತ ೫ ಬಾರಿ ಉತ್ತರ ಪ್ರದೇಶ ರಾಯ್‌ಬರೇಲಿಯಿಂದ ಲೋಕಸಭೆ ಸಂಸದರಾಗಿ ಸೋನಿಯಾ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ೧೯೯೨ರಲ್ಲಿ ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಈ ಮೂಲಕ ರಾಜ್ಯಸಭೆಗೆ ಆಯ್ಕೆಯಾಗಿರುವ ಗಾಂಧಿ ಕುಟುಂಬದ ೨ನೇ ಸದಸ್ಯೆಯಾಗಿದ್ದಾರೆ ಸೋನಿಯಾಗಾಂಧಿ.ಈ ಮೊದಲು ಆಗಸ್ಟ್ ೧೯೬೪ ರಿಂದ ಫೆಬ್ರವರಿ ೧೯೬೭ರವರೆಗೆ ಇಂದಿರಾಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿದ್ದರು.
ಕರ್ನಾಟಕ, ತೆಲಂಗಾಣದಿಂದ ಸ್ಪರ್ಧೆ ಮಾಡುವಂತೆ ಸೋನಿಯಾ ಅವರಿಗೆ ಈ ರಾಜ್ಯಗಳ ನಾಯಕರು ಮನವಿ ಮಾಡಿದ್ದರು. ರಾಹುಲ್‌ಗಾಂಧಿ ಈಗಾಗಲೇ ಕೇರಳದ ವಯನಾಡಿನಿಂದ ಸಂಸದರಾಗಿದ್ದಾರೆ. ಹೀಗಾಗಿ ಉತ್ತರ ಭಾರತ ಪ್ರತಿನಿಧಿಸುವ ದೃಷ್ಟಿಯಿಂದ ಸೊನಿಯಾ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜ್ಯಸಭೆಯಿಂದ ಸೋನಿಯಾ ಆಯ್ಕೆಯಾದರೆ ರಾಯ್‌ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋನಿಯಾ ಅವರ ಬದಲಿಗೆ ಪುತ್ರಿ ಪ್ರಿಯಾಂಕಗಾಂಧಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಮೇಥಿಯಿಂದಲೂ ಪ್ರಿಯಾಂಕ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.ಹೀಗಾಗಿ ಪ್ರಿಯಾಂಕ ಸೂಕ್ತ ಸ್ಪರ್ಧಿ ಎಂದು ಹೇಳಲಾಗಿತ್ತು.ಆದರೆ ಪ್ರಿಯಾಂಕ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಂಡಿಲ್ಲ.
ರಾಜಸ್ತಾನ ಮಾಜಿ ಮುಖ್ಯಮಂತ್ರಿ ಅಶೋಕ್‌ಗೆಲ್ಹೋಟ್ ಪ್ರತಿಕ್ರಿಯೆ ನೀಡಿ ರಾಜಸ್ತಾನದಿಂದ ಸೋನಿಯಾ ಅವರು ಸ್ಪರ್ಧೆ ಮಾಡುತ್ತಿರುವುದರಿಂದ ರಾಜಸ್ತಾನವನ್ನು ರಾಜ್ಯಸಭಾ ಕ್ಷೇತ್ರವನ್ನಾಗಿ ಆಯ್ಕೆಮಾಡಿಕೊಂಡಿದ್ದಾರೆ.ಇದು ಜನರಿಗೆ ಸಕರಾತ್ಮಕ ಸಂದೇಶ ರವಾನಿಸುತ್ತದೆ ಎಂದರು.

ರಾಜ್ಯದಿಂದ ಅಜಯ್ ಮಾಕನ್ ಸ್ಪರ್ಧೆ
ಈ ತಿಂಗಳ ೨೭ ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜ್ಯದಿಂದ ಕೇಂದ್ರದಿಂದ ಮಾಜಿ ಸಚಿವ ಅಜಯ್ ಮಾಕನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ರಾಜ್ಯಸಭೆಯ ರಾಜ್ಯವಿಧಾನಸಭೆಯಿಂದ ನಾಲ್ಕು ಸ್ಥಾನಗಳಿಂದ ಈ ತಿಂಗಳ ೨೭ ರಂದು ಚುನಾವಣೆ ನಡೆಯುತ್ತಿದ್ದು, ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಮೂರು ಸ್ಥಾನಗಳಲ್ಲಿ ಗೆಲ್ಲಲು ಅವಕಾಶವಿದ್ದು, ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ.
ಬಿಜೆಪಿ ತನ್ನ ಒಂದು ಸ್ಥಾನಕ್ಕೆ ಈಗಾಗಲೇ ನಾರಾಯಣಬಾಂಡೆ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಕಾಂಗ್ರೆಸ್‌ನಲ್ಲಿ ಪೈಪೋಟಿ ಹೆಚ್ಚಿರುವ ಕಾರಣ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆ. ೧೫ ನಾಳೆ ಕಡೆಯ ದಿನವಾಗಿದ್ದು, ಇಂದು ಸಂಜೆಯೊಳಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
ಕಾಂಗ್ರೆಸ್‌ನಲ್ಲಿ ಮೂರು ಸ್ಥಾನಗಳಿಗೆ ಅಭ್ಯರ್ಥಿಯಾಗಲಿ ಭಾರಿ ಪೈಪೋಟಿಯೇ ಇದ್ದು, ಒಂದು ಸ್ಥಾನವನ್ನು ಕೇಂದ್ರದ ಮಾಜಿ ಸಚಿವ ಅಜೆಯ್ ಮಾಕನ್ ಅವರಿಗೆ ನೀಡುವ ತೀರ್ಮಾನ ಆಗಿದ್ದು, ಉಳಿದ ಎರಡು ಸ್ಥಾನಗಳಿಗೆ ರಾಜ್ಯದ ಕೈ ಮುಖಂಡರು ಭಾರಿ ಲಾಬಿ ನಡೆಸಿದ್ದಾರೆ.
ಎರಡು ಸ್ಥಾನಗಳಿಗೆ ಮಾಜಿ ಸಚಿವ ಬಿ.ಎಲ್. ಶಂಕರ್, ಹಾಲಿ ಸದಸ್ಯರಾದ ನಾಜಿರ್ ಹುಸೇನ್, ಎಲ್. ಹನುಮಂತಯ್ಯ, ಜೆ.ಸಿ. ಚಂದ್ರಶೇಖರ್ ಸಹ ರೇಸ್‌ನಲ್ಲಿದ್ದು, ಯಾರನ್ನು ಕಣಕ್ಕಿಳಿಸಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ತಲೆ ನೋವಾಗಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಹಾಲಿ ಸದಸ್ಯ ನಾಸಿರ್ ಹುಸೇನ್ ಇಲ್ಲವೆ ಜೆ.ಸಿ. ಚಂದ್ರಶೇಖರ್ ರವರನ್ನು ಮುಂದುವರೆಸುವ ಸಾಧ್ಯತೆಗಳಿದ್ದು, ಇವರಿಬ್ಬರ ಜತೆಗೆ ಅಜೆಯ್ ಮಾಕನ್ ಹೆಸರನ್ನು ಸಂಜೆಯೊಳಗೆ ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಲಿದೆ ಎಂದು ಹೇಳಲಾಗಿದೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜಸ್ತಾನ, ಬಿಹಾರ ಹಿಮಾಚಲಪ್ರದೇಶ, ಮಹಾರಾಷ್ಟ್ರ ರಾಜ್ಯಸಭೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಕಟಿಸಿದೆ. ರಾಜಸ್ತಾನದಿಂದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನೇ ಕಣಕ್ಕಿಳಿಸಲಾಗಿದೆ.