ರಾಜ್ಯಸಭಾ ಸದಸ್ಯರಾಗಿ ವೀರೇಂದ್ರ ಹೆಗ್ಗಡೆ ಪ್ರಮಾಣವಚನ

ನವದೆಹಲಿ,ಜು.೨೧- ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಯಲ್ಲಿಂದು ನೂತನ ದೇವರ ಹೆಸರಿನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.
ಭಾರತ ಸಂವಿಧಾನದಲ್ಲಿ ನಿಜವಾದ ನಂಬಿಕೆಯನ್ನು ಹೊಂದಿ ತಮ್ಮ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಇದಕ್ಕೂ ಮುನ್ನ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ನಂತರ ಸಂಸತ್ ಭವನಕ್ಕೆ ಆಗಮಿಸಿದ ವೀರೇಂದ್ರ ಹೆಗ್ಗಡೆ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ ಆತ್ಮೀಯ ಸ್ವಾಗತ ನೀಡಿ ಬರಮಾಡಿಕೊಂಡರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ವೀರೇಂದ್ರಹೆಗ್ಗಡೆ ಅವರನ್ನು ರಾಜ್ಯಸಭೆಯಲ್ಲಿ ನೋಡಲು ಅವಕಾಶ ಸಿಕ್ಕಿರುವುದು ಸಂತಸವುಂಟು ಮಾಡಿದೆ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪಿಯೂಷ್‌ಗೋಯಲ್ ಹಾಗೂ ಸಂಸದ ನಳೀನ್‌ಕುಮಾರ್ ಕಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.