ರಾಜ್ಯಸಭಾ ಸದಸ್ಯರಾಗಿ ಪಿ.ಟಿ ಉಷಾ ಪ್ರಮಾಣವಚನ ಸ್ವೀಕಾರ

ನವದೆಹಲಿ,ಜು.೨೦- ದೇಶದ ಪ್ರಖ್ಯಾತ ಮಾಜಿ ಅಥ್ಲಿಟ್ ಪಿ.ಟಿ ಉಷಾ ಅವರು ಇಂದು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಖ್ಯಾತ ಸಂಗೀತಗಾರ ಇಳಯರಾಜ, ಚಿತ್ರ ಕತೆಗಾರ ವಿಜಯೇಂದ್ರ ಪ್ರಸಾದ್ ಮತ್ತು ಪಿ.ಟಿ ಉಷಾ ಈ ನಾಲ್ವರನ್ನು ರಾಜ್ಯಸಭೆಗೆ ನಾಮಕರಣ ಮಾಡಿತ್ತು.
ರಾಜ್ಯಸಭೆಗೆ ನಾಮಕರಣಗೊಂಡಿದ್ದ ಪಿ.ಟಿ ಉಷಾ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಪಿ.ಟಿ. ಉಷಾ ಅವರು ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಜೆ.ಪಿ ನಡ್ಡಾ ಅವರು ಪಿ.ಟಿ ಉಷಾರವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದರು.
ಕೇರಳದ ಕೋಜಿಕೋಡ್ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಜನಿಸಿದ ಪಿ.ಟಿ ಉಷಾ ಅವರು ಭಾರತದ ಅಪ್ರತಿಮ ಓಟಗಾರ್ತಿಯಾಗಿ ಹೆಸರು ಪಡೆದಿದ್ದು, ಪಯ್ಯೋಲಿ ಎಕ್ಸ್‌ಪ್ರೆಸ್ ಎಂದೇ ಜನಪ್ರಿಯರಾಗಿದ್ದರು. ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿರುವ ಪಿ.ಟಿ ಉಷಾ ಅವರು ೧೯೮೪ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ೪೦೦ ಮೀ ಹರ್ಡಲ್ಸ್‌ನಲ್ಲಿ ಕೂದಲೆಳೆಯಿಂದ ಕಂಚಿನ ಪದಕವನ್ನು ತಪ್ಪಿಸಿಕೊಂಡಿದ್ದರು.
ರಾಜ್ಯಸಭೆಗೆ ಆಯ್ಕೆಯಾಗಿರುವ ಮಾಜಿ ಕ್ರಿಕೆಟಿಗ ಹರ್ಭಜನ್‌ಸಿಂಗ್, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್‌ಯಾದವ್ ಅವರ ಪುತ್ರಿ ಮೀಸಾ ಭಾರತಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ಶುಕ್ಲಾ, ಮಹಾರಾಷ್ಟ್ರದ ಪ್ರಫುಲ್‌ಪಟೇಲ್, ಸಂಜಯ್‌ರಾವುತ್, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಕಪಿಲ್‌ಸಿಬಲ್ ಸೇರಿದಂತೆ ೨೫ ಮಂದಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದರು.