ರಾಜ್ಯಸಭಾ ಟಿಕೆಟ್ – ಶಂಕ್ರಪ್ಪರ ಪರ ಹೈಕಮಾಂಡ್ ಒಲವು

ರಾಯಚೂರು.ನ.09- ಅಶೋಕ ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಈಗ ಮತ್ತೊಂದು ಹೆಸರು ಕೇಳಿ ಬಂದಿದೆ.
ಈ ಹಿಂದೆ ಕೋರ ಕಮಿಟಿ ಸಭೆಯಲ್ಲಿ ಸುಮಾ ಆಶೋಕ ಗಸ್ತಿ ಅವರ ಪರ ಒಲವು ವ್ಯಕ್ತಗೊಂಡಿತ್ತು. ಈಗ ಜಿಲ್ಲೆಯ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ ಅವರ ಹೆಸರು ಕೇಳಿ ಬರುತ್ತಿದೆ. ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎನ್.ಶಂಕ್ರಪ್ಪ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವುದಕ್ಕೆ ಸಂಬಂಧಿಸಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಎನ್.ಶಂಕ್ರಪ್ಪ ಅವರ ಪರ ಒಲವು ವ್ಯಕ್ತಗೊಂಡಿದೆಂದು ಹೇಳಲಾಗಿದೆ. ಕಳೆದ ಸಂದರ್ಭದಲ್ಲಿ ರಾಜ್ಯಸಭಾ ಸ್ಥಾನ ನೀಡುವ ಕುರಿತು ಹೈಕಮಾಂಡ್‌ನಲ್ಲಿ ಚರ್ಚೆ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಇಬ್ಬರು ಮುಖಂಡರ ಹೆಸರು ಚಾಲ್ತಿಯಲ್ಲಿದ್ದವು ಎಂದು ಹೇಳಲಾಗುತ್ತಿದೆ.
ಅಶೋಕ ಗಸ್ತಿ ಅವರಿಗೆ ಯಾವುದೇ ಅವಕಾಶ ದೊರೆಯದಿರುವುದರಿಂದ ಅವರ ಹೆಸರು ಅಂತಿಮಗೊಂಡು ರಾಜ್ಯಸಭೆ ಸ್ಥಾನ ಅಶೋಕ ಗಸ್ತಿ ಅವರಿಗೆ ನೀಡಲಾಗಿತ್ತು.
ದುರದೃಷ್ಟವಶಾತ್ ಅವರು ಕೊರೊನಾಕ್ಕೆ ಬಲಿಯಾಗಿ ಈಗ ಮತ್ತೆ ಡಿಸೆಂಬರ್ 1 ಕ್ಕೆ ಚುನಾವಣೆ ನಡೆಯುವಂತಾಗಿದೆ. ರಾಜ್ಯಸಭಾ ಸ್ಥಾನ ಅವರ ಪತ್ನಿ ಸುಮಾ ಅವರಿಗೆ ನೀಡುವಂತೆ ಒತ್ತಡ ತೀವ್ರವಾಗಿವೆ. ಆದರೆ, ಮತ್ತೊಂದು ಕಡೆ ಎನ್.ಶಂಕ್ರಪ್ಪನಂತಹ ಹಿರಿಯ ನಾಯಕರು ಇರುವುದರಿಂದ ಹೈಕಮಾಂಡ್ ಈ ಬಗ್ಗೆಯೂ ಪರಿಶೀಲಿಸುವಂತಹ ಒತ್ತಡಕ್ಕೊಳಗಾಗಿದೆ. ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎನ್.ಶಂಕ್ರಪ್ಪ ಅವರಿಗೆ ಟಿಕೆಟ್ ನೀಡುವ ಬಗ್ಗೆ ಗಂಭೀರ ಚರ್ಚೆ ಈಗ ರಾಜ್ಯಸಭಾ ಟಿಕೆಟ್ ಹಂಚಿಕೆ ಹೊಸ ತಿರುವು ಪಡೆಯುವಂತೆ ಮಾಡಿದೆ.
ರಾಯಚೂರು ಜಿಲ್ಲೆಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ಗಂಭೀರವಾಗಿದೆ ಎನ್ನುವುದಕ್ಕೆ ಈ ಚರ್ಚೆಗಳು ನಿದರ್ಶನವಾಗಿವೆ. ಅಶೋಕ ಗಸ್ತಿ ನಿಧನದಿಂದ ಕೈತಪ್ಪಿದ ಪ್ರತಿಷ್ಠಿತ ರಾಜ್ಯಸಭಾ ಸ್ಥಾನ ಮತ್ತೇ ಜಿಲ್ಲೆಗೆ ದೊರೆಯುವುದೇ ಎನ್ನುವ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿತ್ತು. ಸುಮಾ ಗಸ್ತಿಗೆ ಟಿಕೆಟ್ ನೀಡುವಂತೆ ವಿವಿಧ ಸಂಘಟನೆ ಒತ್ತಾಯಿಸುತ್ತಿವೆ. ಅಶೋಕ ಗಸ್ತಿ ಅವರು ಸಂಘಟನೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಕಾಲಿಕ ಅವರ ನಿಧನ ಈಗ ಅವರ ಕುಟುಂಬದ ಪರ ಅನುಕಂಪದ ಅಲೆ ಹೆಚ್ಚುವಂತೆ ಮಾಡಿದೆ.
ಸುಮಾ ಗಸ್ತಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿ, ನ್ಯಾಯ ಒದಗಿಸುವಂತೆ ಒತ್ತಾಯಿಸಲಾಗುತ್ತಿದೆ. ಮತ್ತೊಂದು ಕಡೆ ಹೈಕಮಾಂಡ್ ಪಕ್ಷದ ಹಿರಿಯ ನಾಯಕರಾದ ಎನ್.ಶಂಕ್ರಪ್ಪ ಅವರ ಪರ ಒಲವು ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಈ ಇಬ್ಬರಲ್ಲಿ ಡಿಸೆಂಬರ್ 1 ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಯಾರು ಅಭ್ಯರ್ಥಿಯಾಗುತ್ತಾರೆ ಎನ್ನುವುದು ಈಗ ಕಾದು ನೋಡುವಂತೆ ಮಾಡಿದೆ.