ರಾಜ್ಯಸಭಾ ಚುನಾವಣೆ:ಕೈ ಶಾಸಕರ ಹೋಟೆಲ್ ವಾಸ್ತವ್ಯ

ನಾಳೆ ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸಿಬ್ಬಂದಿ ವರ್ಗ ತಯಾರಿ ಮಾಡಿಕೊಳ್ಳುತ್ತಿರುವುದು.

ಬೆಂಗಳೂರು, ಫೆ. ೨೬- ನಾಳೆ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಕೈ ಶಾಸಕರನ್ನು ಹಿಡಿದಿಟ್ಟುಕೊಂಡು ಯಾವುದೇ ಅಡ್ಡ ಮತದಾನಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ಇಂದು ಹೋಟೆಲ್‌ಗೆ ಕರೆದೊಯ್ಯಲಾಗಿದೆ. ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ತಾರಾ ಹೋಟೆಲ್‌ನಲ್ಲಿ ಕೈ ಶಾಸಕರು ಇಂದು ವಾಸ್ತವ್ಯ ಹೂಡಲಿದ್ದು, ನಾಳೆ ನಡೆಯುವ ರಾಜ್ಯಸಭಾ ಚುನಾವಣೆಗೆ ಹೋಟೆಲ್‌ನಿಂದಲೇ ನೇರವಾಗಿ ವಿಧಾನಸೌಧಕ್ಕೆ ಬಂದ ಮತ ಹಾಕುವರು.
ಸಿಎಲ್‌ಪಿ ಸಭೆ
ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಹೋಟೆಲ್‌ನಲ್ಲೇ ಇಂದು ಸಂಜೆ ೬ ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರುಗಳು ನಾಳಿನ ರಾಜ್ಯಸಭೆಯ ಮತದಾನದ ಬಗ್ಗೆ ಶಾಸಕರುಗಳಿಗೆ ಈ ಸಭೆಯಲ್ಲಿ ಮಾರ್ಗದರ್ಶನ ಮಾಡುವರು ಎನ್ನಲಾಗಿದೆ.
ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯ್ ಮಾಕನ್, ಸೈಯದ್ ನಾಜೀರ್ ಹುಸೇನ್, ಚಂದ್ರಶೇಖರ್ ಸಹ ಪಾಲ್ಗೊಳ್ಳುವರು. ಈ ಸಭೆಯಲ್ಲಿ ಯಾವ ಶಾಸಕರು ಕಾಂಗ್ರೆಸ್‌ನ ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು, ಹಾಗೆಯೇ ಮೊದಲ ಪ್ರಾಶಸ್ತ್ಯ ಮತದ ಜತೆಗೆ, ೨ನೇ ಪ್ರಾಶಸ್ತ್ಯದ ಮತವನ್ನು ಯಾರಿಗೆ ಹಾಕಬೇಕು ಎಂಬುದನ್ನು ಶಾಸಕರಿಗೆ ಪಟ್ಟಿ ನೀಡಲಾಗುವುದು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಇಂದಿನ ಶಾಸಕಾಂಗ ಪಕ್ಷದ ಸಭೆಯ ನಂತರ ಎಲ್ಲ ಶಾಸಕರಿಗೂ ಹೋಟೆಲ್‌ನಲ್ಲೇ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಶಾಸಕರ ಜತೆ ಹಲವು ಸಚಿವರು ಸಹ ಹೋಟೆಲ್‌ನಲ್ಲೇ ಉಳಿಯಲಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಹೋಟೆಲ್‌ನಲ್ಲೇ ಶಾಸಕರ ಜತೆ ರಾತ್ರಿ ತಂಗುವರು ಎಂದು ಹೇಳಲಾಗಿದೆ. ಇಂದಿನ ವಿಧಾನಮಂಡಲದ ಅಧಿವೇಶನದ ನಂತರ ಎಲ್ಲ ಶಾಸಕರು ಹೋಟೆಲ್‌ಗೆ ತೆರಳಿದರು.
ನಾಳಿನ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯುತ್ತಿದ್ದು, ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.ವಿಧಾನಸಭೆಯ ಬಲಾಬಲದ ಪ್ರಕಾರ ಕಾಂಗ್ರೆಸ್‌ನ-೩, ಬಿಜೆಪಿ-೧ ಸ್ಥಾನವನ್ನು ಗೆಲ್ಲಲು ಅವಕಾಶವಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಕುಪೇಂದ್ರರೆಡ್ಡಿ ಗೆಲುವಿಗೆ ೪೫ ಮತಗಳ ಅಗತ್ಯವಿದ್ದು, ಬಿಜೆಪಿ-ಜೆಡಿಎಸ್‌ನ ಹೆಚ್ಚುವರಿ ಮತಗಳು ಸೇರಿ ೪೦ ಮತಗಳಾಗುತ್ತವೆ. ಹಾಗಾಗಿ ಐದು ಮತಗಳ ಕೊರತೆ ಕುಪೇಂದ್ರರೆಡ್ಡಿ ಅವರಿಗೆ ಇದ್ದು ,ಈ ಮತಗಳನ್ನು ಒಗ್ಗೂಡಿಸಲು ಅವರು ಸರ್ವಪ್ರಯತ್ನ ನಡೆಸಿದ್ದಾರೆ.
ಅಡ್ಡ ಮತದಾನದ ಮೂಲಕ ಕೆಲ ಶಾಸಕರ ಮತ ಗಳಿಸುವ ಪ್ರಯತ್ನ ನಡೆದಿದೆಯಾದರೂ ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಅಡ್ಡ ಮತದಾನ ಆಗುವ ಸಾಧ್ಯತೆಗಳು ತೀರಾ ಕಡಿಮೆ. ಈ ಚುನಾವಣೆಯಲ್ಲಿ ಪ್ರತಿ ಶಾಸಕರು ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದನ್ನು ಪಕ್ಷದ ಏಜೆಂಟ್‌ಗೆ ತೋರಿಸಿಯೇ ಮತ ಹಾಕಬೇಕು. ಹಾಗಾಗಿ ಅಡ್ಡ ಮತದಾನ ಮಾಡುವುದು ಅಷ್ಟು ಸುಲಭವಲ್ಲ. ಯಾರೇ ಅಡ್ಡ ಮತದಾನ ಮಾಡಿದರೂ ಅದು ಆ ಪಕ್ಷದ ಏಜೆಂಟ್‌ಗೆ ಗೊತ್ತಾಗುತ್ತದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡುವ ಸಾಧ್ಯತೆಗಳು ತೀರಾ ಕಡಿಮೆ.ಹಾಗಾಗಿ ಕುಪೇಂದ್ರರೆಡ್ಡಿ ಚುನಾವಣೆಯಲ್ಲಿ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.
ಚುನಾವಣೆಗೆ ಸಿದ್ಧತೆ
ನಾಳಿನ ರಾಜ್ಯಸಭಾ ಚುನಾವಣೆ ಮತದಾನಕ್ಕೆ ವಿಧಾನಸೌಧದಲ್ಲಿ ಸಿದ್ಧತೆಗಳು ನಡೆದಿದ್ದು, ಮೊದಲನೇ ಮಹಡಿಯಲ್ಲಿರುವ ಸಮಿತಿ ಕೊಠಡಿ ಸಂಖ್ಯೆ ೧೦೪ ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಈ ಚುನಾವಣೆಯ ಚುನಾವಣಾಧಿಕಾರಿಯಾಗಿ ಕಾರ್ಯಭಾರ ನಿರ್ವಹಿಸುವರು.