ರಾಜ್ಯಸಭಾ ಉಪ ಚುನಾವಣೆ : ಸೋಂಕು ನಿಯಂತ್ರಣ ಕ್ರಮಗಳನ್ವಯ ಮತದಾನ – ಚುನಾವಣಾಧಿಕಾರಿ

ಬೆಂಗಳೂರು, ನ 10 – ರಾಜ್ಯ ಸಭೆಯ ಸದಸ್ಯರಾಗಿದ್ದ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪ ಚುನಾವಣೆ ನಡೆಯಲಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ತಿಳಿಸಿದ್ದಾರೆ.

ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣಾ ಪ್ರಕ್ರಿಯೆಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿಯ ಜೊತೆಗೆ ಗರಿಷ್ಠ 2 ಜನರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಚುನಾವಣಾಧಿಕಾರಿಯ ಕಛೇರಿಯ ಒಳಗೆ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೈಗಳನ್ನು ಸ್ವಚ್ಚಗೊಳಿಸಲು ಸ್ಯಾನಿಟೈಸರ್ ವ್ಯವಸ್ಥೆಗೊಳಿಸಲಾಗಿರುತ್ತದೆ. ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ ಒಳಗೆ ಬಿಡಲಾಗುವುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.

ಈ ಉಪ ಚುನಾವಣೆಗೆ ಚುನಾವಣಾಧಿಕಾರಿಯಾಗಿ ತಾವು, ಉಪ ಕಾರ್ಯದರ್ಶಿಯಾದ ವಿ. ಮೋಹನಮೂರ್ತಿ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ನಾಮಪತ್ರಗಳನ್ನು ಬುಧವಾರದಿಂದ ಸಲ್ಲಿಸಬಹುದಾಗಿದ್ದು, 18 ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ 19 ರಂದು ನಡೆಯಲಿದ್ದು, 23 ರಂದು ನಾಮಪತ್ರ ವಾಪಸ್ಸು ಪಡೆಯಬಹುದಾಗಿದೆ. ಅವಶ್ಯವಿದ್ದಲ್ಲಿ ಡಿಸೆಂಬರ್ 1 ರಂದು ಬೆಳಿಗ್ಗೆ 9-00 ರಿಂದ ಸಂಜೆ 4-00 ಗಂಟೆಯವರೆಗೆ ಮತಾನ ನಡೆಯಲಿದೆ. ಸದರಿ ಚುನಾವಣೆಗೆ ವಿಧಾನ ಸಭೆಗೆ ಚುನಾಯಿತಗೊಂಡಿರುವ 222 ಸದಸ್ಯರು (ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಗಳು ಒಳಗೊಂಡಂತೆ) ಮತದಾರರಾಗಿರುತ್ತಾರೆ. ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಬೇಕಾಗಿದೆ.

ಚುನಾವಣಾಧಿಕಾರಿಯವರ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಂದರ್ಭದ ಚಿತ್ರೀಕರಣವನ್ನು ವಾರ್ತಾ ಇಲಾಖೆಯವರ ಸಹಯೋಗದೊಡನೆ ಚಿತ್ರೀಕರಿಸಿ ಅವರ ಮುಖಾಂತರ ಎಲ್ಲಾ ಮಾಧ್ಯಮಗಳಿಗೂ ನೀಡಲು ವ್ಯವಸ್ಥೆಗೊಳಿಸಲಾಗಿದೆ. ಚುನಾವಣಾಧಿಕಾರಿಯವರ ಕಚೇರಿಯ ಒಳಗೆ ಮಾಧ್ಯಮ ಮಿತ್ರರನ್ನು ಬಿಡಲು ಅನನುಕೂಲವಾಗಲಿದ್ದು, ಇದಕ್ಕೆ ಸಹಕರಿಸಬೇಕು ಎಂದು ವಿಶಾಲಾಕ್ಷಿ ತಿಳಿಸಿದರು.