ರಾಜ್ಯವ್ಯಾಪಿ ದ್ವೇಷ ಅಳಿಸೋಣ, ದೇಶ ಉಳಿಸೋಣ ಅಭಿಯಾನ

ಕಲಬುರಗಿ:ನ.02: ರಾಜ್ಯೋತ್ಸವದಂದು ರಾಜ್ಯವ್ಯಾಪಿ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಅಭಿಯಾನ ಆರಂಭಿಸಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಎಂ.ಎ. ಖದಿರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಧರ್ಮದವರು ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಜನರ ನಡುವೆ ಧರ್ಮದ ಹೆಸರಿನಲ್ಲಿ ದ್ವೇಷ, ಅಸೂಯೆ ಹುಟ್ಟಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹರಡಿಸಿ ನೆಮ್ಮದಿ ಕೆಡಿಸುವ ಕಾರ್ಯ ಎಗ್ಗಿಲ್ಲದೇ ನಿರಂತರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಭದ್ರಪಡಿಸಲು ಸುಳ್ಳಿನ ಮುಖಾಂತರ ಜನರ ನಡುವೆ ದ್ವೇಷದ ಕಿಚ್ಚು ಹಚ್ಚುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಾಕಷ್ಟು ಉದಾಹರಣಗಳಿವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕನ್ನಡ ನಾಡಿನಲ್ಲಿ ಪ್ರಚೋದನಕಾರಿ ಭಾಷಣಗಳು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿವೆ. ಪರಿಣಾಮವಾಗಿ ಜಾತಿ ನಿಂದನೆ, ಜಾತಿ ಸಂಘರ್ಷ, ಕೋಮು ಗಲಭೆಗಳು ಸಂಭವಿಸಿ ಅಮಾಯಕರ ಕೊಲೆಯಲ್ಲಿ ಮುಕ್ತಾಯವಾಗುತ್ತಿವೆ. ಇದು ರಾಜ್ಯದ ಸೌಹಾರ್ದ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ. ಇದು ಎಲ್ಲರಿಗೂ ಹಾನಿಕಾರಕ ಎಂದು ಅವರು ಆತಂಕ ಹೊರಹಾಕಿದರು.
ಸಮಾಜದಲ್ಲಿ ಅಶಾಂತಿಯ ವಾತಾವರಣ ಇದ್ದರೆ ಕನ್ನಡಿಗರು ಒಟ್ಟಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪರಿಸ್ಥಿತಿಯ ಗಾಂಭೀರ್ಯತೆ ಅರಿತು ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ನೆಲೆಯೂರಲಿ ಎಂಬ ಸದಾಶಯದಿಂದ ಪಕ್ಷವು ನವೆಂಬರ್ 1ರಿಂದ ಹತ್ತರವರೆಗೆ ದ್ವೇಷ ಅಳಿಸೋಣ, ದೇಶ ಉಳಿಸೋಣ ಅಭಿಯಾನ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ರಾಜ್ಯದ ನಾಗರಿಕರಲ್ಲಿ ದ್ವೇಷ ರಾಜಕೀಯದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕುಗ್ಗುತ್ತಿರುವ ರಾಜಕೀಯ ಸ್ಥಾನ ಮತ್ತು ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯಾಧಾರಿತ ರಾಜಕೀಯದ ಮಹತ್ವದ ಕುರಿತು ತಿಳುವಳಿಕೆ ಮೂಡಿಸಲಾಗುವುದು. ಪ್ರೀತಿ, ಶಾಂತಿ ಸಹೋದರತೆ ಬಯಸುವ ನಾಗರಿಕರಿಗೆ ಒಗ್ಗೂಡಿಸಲಾಗುವುದು. ಸುಳ್ಳು ರಾಜಕೀಯದ ವಿರುದ್ಧ ಧ್ವನಿ ಎತ್ತಲು ಪ್ರೇರೇಪಿಸಲಾಗುವುದು ಎಂದು ಅವರು ವಿವರಿಸಿದರು.
ರಾಜ್ಯೋತ್ಸವದ ಧ್ವಜಾರೋಹಣದ ಮೂಲಕ ಅಭಿಯಾನಕ್ಕೆ ಚಾಲನೆ ದೊರಕಿದೆ. ಅಭಿಯಾನದಲ್ಲಿ ಭಿತ್ತಿಪತ್ರ ಬಿಡುಗಡೆ, ಸುದ್ದಿಗೋಷ್ಠಿ, ಗುಂಪು ಸಭೆ, ಸಾರ್ವಜನಿಕ ಸಭೆ, ಬೀದಿ ನಾಟಕ, ಜಾಥಾ, ದ್ವಿಚಕ್ರವಾಹನಗಳ ರ್ಯಾಲಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಭಿಯಾನದಲ್ಲಿ ನಾಡಿನ ಸಮಸ್ತ ಜನತೆ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಮುಬೀನ್ ಅಹ್ಮದ್, ಮುಜಾಹಿದ್ ಪಾಷಾ, ತಾಜೋದ್ದೀನ್ ಇಲಕಲ್, ಸಿದ್ದಣ್ಣ ಚಕರಾ, ಸೈಯದ್ ಮುನೀರ್ ಹಾಶ್ಮಿ, ಯಾದಗಿರಿ ಜಿಲ್ಲಾಧ್ಯಕ್ಷ ಮೊಹ್ಮದ್ ಸಲೀಂ ಚಿತ್ತಾಪೂರಿ ಮುಂತಾದವರು ಉಪಸ್ಥಿತರಿದ್ದರು.