ರಾಜ್ಯವನ್ನು ಲೂಟಿ ಮಾಡಿದ್ದು ಬಿಜೆಪಿ ಸರ್ಕಾರದ ಸಾಧನೆ

ಮೈಸೂರು,ಜು.27:- ರಾಜ್ಯವನ್ನು ಲೂಟಿ ಮಾಡಿದ್ದು, ವಿವಾದ ಸೃಷ್ಟಿಸಿದ್ದು, ಕೋಮು ವಿಷ ಬೀಜ ಬಿತ್ತಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ವ್ಯಂಗ್ಯವಾಡಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಆಡಳಿತದ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶೇ.40 ಪರ್ಸೆಂಟ್ ಕಮಿಷನ್ ಪಡೆಯುವುದರ ಮೂಲಕ ಕರ್ನಾಟಕವನ್ನು ನಂಬರ್ ವನ್ ಭ್ರಷ್ಟ ರಾಜ್ಯವನ್ನಾಗಿ ಮಾಡಿದೆ. ರಾಜ್ಯದ ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದ್ದು ಅನೇಕ ಸಚಿವರು ಮತ್ತು ಬಿಜೆಪಿ ಶಾಸಕರು ಭಾಗಿಯಾಗಿದ್ದಾರೆಂದು ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ದಾಖಲೆ ಸಮೇತ ಬಹಿರಂಗಪಡಿಸಿದ್ದರು ಎಂದು ವಾಗ್ದಾಳಿ ನಡೆಸಿದರು.
ಪಿಎಸ್ ಐ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲತೆ ಕಂಡಿತು. ಅಲ್ಲದೇ 2021-22ನೇ ಸಾಲಿನಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ 7250ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ. ಸುಮಾರು 1242ಸಹಾಯಕ ಪ್ರಾಧ್ಯಾಪಕರ ಹುದ್ದೆ ಮತ್ತು 310 ಪ್ರಾಂಶುಪಾಲರ ಹುದ್ದೆ ನೇಮಕಾತಿ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ ಎಂದರು.
ಬಜೆಟ್ ನಲ್ಲಿ ಒದಗಿಸಿದ್ದ ಒಟ್ಟು ಅನುದಾನದ ಪೈಕಿ ಶೇ.45ರಷ್ಟು ಮಾತ್ರ ವೆಚ್ಚ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ. ಇದರ ಅರ್ಥ ಬಿಜೆಪಿ ಸರ್ಕಾರ ನಿಗದಿಪಡಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲವೆಂದರೆ ಅಭಿವೃದ್ಧಿಯಾಗಿಲ್ಲವೆಂದರ್ಥ ಎಂದರು.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಟ್ಟು 921.22ಕೋಟಿ ರೂ.ಗಳು ಬಿಡುಗಡೆಯಾಗಿಲ್ಲ. ಕೇಂದ್ರದ ಮೇಲೆ ಒತ್ತಡ ತಂದು ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಮಾಡಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಶ್ರೀಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಸಾವಿರಾರು ಕೋಟಿ ರೂ.ವಹಿವಾಟು ನಡೆಸುವ ಹಲವು ಕಂಪನಿಗಳಿಗೆ ಕಳೆದ 2ವರ್ಷಗಳಲ್ಲಿ ವಿಧಿಸಿದ ಬಡ್ಡಿ ಮತ್ತು ದಂಡದ ಮೊತ್ತ 3,188.17ಕೋಟಿ ರೂ.ಗಳನ್ನು ಮನ್ನಾ ಮಾಡಿದೆ ಎಂದು ದೂರಿದರು.
ಪಠ್ಯಪುಸ್ತಕ ಅವಾಸ್ತವಿಕ ಪರಿಷ್ಕರಣೆ ಮಾಡಲಾಗಿದೆ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯದಲ್ಲಿ ಹಿಜಾಬ್ ಪ್ರಕರಣ ಹುಟ್ಟು ಹಾಕಿದೆ. ಜನಪರ ಯೋಜನೆಗಳನ್ನು ರದ್ದುಗೊಳಿಸಿ, ಸಂಘ ಪರಿವಾರಕ್ಕೆ ಸರ್ಕಾರಿ ಭೂಮಿ ಮತ್ತು ಹಣ ನೀಡಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರಿದ್ದರು.