ರಾಜ್ಯಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಹೊಸಪೇಟೆಯಲ್ಲಿ 108 ಎತ್ತಿನಬಂಡಿ ಉತ್ಸವ ಮೆರವಣಿಗೆ

ಹೊಸಪೇಟೆ, ನ.17- ಅಖಿಲ ಭಾರತ ಸಹಕಾರ ಸಪ್ತಾಹದ 67ನೇ. ವರ್ಷಾಚರಣೆಯನ್ನು ಈ ಬಾರಿ ಹೊಸಪೇಟೆಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಅದರಂತೆ ನ.19ರಂದು ಮುನ್ಸಿಪಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಸಹಕೋರ ಯೂನಿಯನ್ ನಿಯಮಿತ ಅಧ್ಯಕ್ಷರಾದ ಜೆ.ಎಂ.ಶಿವಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಗರದಲ್ಲಿ ಇಂದು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 67ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ನಡೆಸಲು ತೀರ್ಮಾನಿಸಿದ್ದು, ಈ ಬಾರಿ ಕೊರೋನಾ ಸೋಂಕು-ಆತ್ಮ ನಿರ್ಭರ ಬಾರತ-ಸಹಕಾರ ಸಂಸ್ಥೆಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಸಪ್ತಾಹವನ್ನು ಆಚರಿಸಲಾಗುತ್ತದೆ. 7 ದಿನಗಳು ಸಹ ವಿವಿಧ ವಿಷಯಗಳ ಕುರಿತು ಸಮಾಲೋಚನೆ ಮತ್ತು ಚರ್ಚೆಗಳು ನಡೆಯುತ್ತವೆ.
ಕಾರ್ಯಕ್ರಮದ ಮೊದಲ ದಿನ ಬೆಳಗ್ಗೆ 9ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಚೇರಿಯ ರಸ್ತೆಯ ಮೂಲಕ ಮುನ್ಸಿಪಲ್ ಮೈದಾನದವರೆಗೂ ಮೆರವಣಿಗೆ ನಡೆಸಲಾಗುತ್ತದೆ.
ಕಾರ್ಯಕ್ರಮದ ಉದ್ಗಾಟನೆಯನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಕಾರ ವಿಶೇಷ ಸಂಚಿಕೆಯನ್ನು ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ವಹಿಸಲಿದ್ದಾರೆ, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ ಎಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.
ಹೊಸಪೇಟೆಯಲ್ಲಿ ಇದು 5ನೇ ಬಾರಿ ಆಚರಿಸಲಾಗುತ್ತಿದ್ದು, ಸಹಕಾರ ಸಂಸ್ಥೆಯಲ್ಲಿ ಸರ್ಕಾರದ ಯೋಜನೆಗಳ ಸೌಲಭ್ಯಗಳ ಕುರಿತಂತೆ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ. ಈ ಬಾರಿ ಮೆರವಣಿಗೆಯಲ್ಲಿ ಎತ್ತಿನಬಂಡಿ ಉತ್ಸವ ಹಮ್ಮಿಕೊಂಡಿದ್ದು, 108 ಎತ್ತಿನಬಂಡಿಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿ ಎತ್ತಿನಬಂಡಿಗೆ 2500 ಪ್ರೋತ್ಸಾಹ ಧನ ಹಾಗೂ ಉತ್ತಮವಾಗಿ ಅಲಂಕಾರಗೊಳಿಸಿದ ಎತ್ತುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಿ ಕ್ರಮವಾಗಿ 25 ಸಾವಿರ, 15 ಸಾವಿರ ಹಾಗೂ 10 ಸಾವಿರ ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ವಿತರಿಸಲಿದ್ದಾರೆ. ಕಾರ್ಯಕ್ರಮವನ್ನು ಕೊವಿಡ್19 ಶಿಷ್ಠಾಚಾರ ಪ್ರಕಾರ ಆಯೋಜಿಸಲಾಗಿದ್ದು 250 ಜನರಿಗೆ ಮಾತ್ರ ಆಹ್ವಾನಿತರು ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಬಿಡಿಸಿಸಿ ಅಧ್ಯಕ್ಷರಾದ ಚಂದ್ರಶೇಖರ್, ಬಿಡಿಸಿಸಿ ಉಪಾಧ್ಯಕ್ಷ ಕೆ ತಿಪ್ಪೇಸಾಮಿ, ಬಿಡಿಸಿಸಿ ನಿರ್ದೇಶಕ ಎಲ್.ಎಸ್.ಆನಂದ್, ಬಳ್ಳಾರಿ ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕರು ನಾಗರಾಜ್ ಬಿಕೆ, ARCS ಬಳ್ಳಾರಿಯ ಶರಣಬಸಪ್ಪ ಹಾಗೂ ARCS ಹೊಸಪೇಟೆ ಲಿಯಾಕತ್ ಅಲಿ ಅವರು ಇದ್ದರು.