ರಾಜ್ಯಮಟ್ಟದ `ಶ್ರೀ ಸಿದ್ಧ ಸಾಹಿತ್ಯ ಪುರಸ್ಕಾರ’ಕ್ಕೆ ಐದು ಕೃತಿಗಳ ಆಯ್ಕೆ

ಯಾದಗಿರಿ, ಸೆ.5: ಇಲ್ಲಿನ ಶ್ರೀ ಸಿದ್ಧಸಂಪದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ ಪ್ರಥಮ ಬಾರಿಗೆ ನೀಡಲಾಗುತ್ತಿರುವ ರಾಜ್ಯ ಮಟ್ಟದ “ಶ್ರೀ ಸಿದ್ಧ ಸಾಹಿತ್ಯ ಪುರಸ್ಕಾರ” ಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಬರೆದ ಮಹಾತ್ಮರ ಚರಿತಾಮೃತ', ಸೇಡಂನ ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ ಬರೆದಮುಗಿಲು ಸುರಿದ ಮುತ್ತು’ ಸೇರಿದಂತೆ ವಿವಿಧ ಐದು ಕೃತಿಗಳು ಆಯ್ಕೆಯಾಗಿವೆ ಎಂದು ಟ್ರಸ್ಟ್‍ನ ನಿರ್ದೇಶಕ ಡಾ.ಸಿದ್ಧರಾಜರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಅಮರೇಶ ಯತಗಲ್ ಅವರ ಕರ್ನಾಟಕದ ಜೀವಂತ ನಾಯಕ ಅರಸು ಮನೆತನಗಳು' ಎಂಬ ಸಂಶೋಧನಾ ಕೃತಿ, ಶಹಾಪುರದ ಹಿರಿಯ ಲೇಖಕ ಸಿದ್ಧರಾಮ ಹೊನಕಲ್ ರವರಆತ್ಮಸಖಿಯ ಧ್ಯಾನದಲಿ’ ಗಜಲ್ ಸಂಕಲನ, ಬೀದರ ಜಿಲ್ಲೆಯ ಬಿ.ಜೆ.ಪಾರ್ವತಿ ವಿ.ಸೋನಾರೆ ಅವರ `ಅಪ್ಪನೊಳಗೊಬ್ಬ ಅವ್ವ’ ವೈಚಾರಿಕ ಲೇಖನಗಳ ಕೃತಿಗಳನ್ನು ಆಯ್ಕೆ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಾದ್ಯಂತ ನೂರಾರು ಲೇಖಕರು ನಮ್ಮ ಪ್ರಕಟಣೆಗೆ ಸ್ಪಂದಿಸಿ ತಮ್ಮ ಕೃತಿಗಳನ್ನು ಕಳುಹಿಸಿದ್ದು, ಅದರಲ್ಲಿ ಈ ಐದು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ಐದು ಸಾವಿರ ರೂ. ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಇದೇ ರೀತಿ ನಾಡಿನ ಸಾಹಿತ್ಯ ಲೋಕದ ಐದು ಮೌಲಿಕ ಕೃತಿಗಳಿಗೆ ಪ್ರಶಸ್ತಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲಿ ಯಾದಗಿರಿ ನಗರದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಶ್ರೀ ಸಿದ್ದ ಸಾಹಿತ್ಯ ಪುರಸ್ಕಾರವನ್ನು ಐವರಿಗೆ ಪ್ರದಾನ ಮಾಡಲಾಗುವುದು ಎಂದು ಡಾ.ಸಿದ್ದರಾಜರೆಡ್ಡಿ ತಿಳಿಸಿದ್ದಾರೆ.