ರಾಜ್ಯಮಟ್ಟದ ಚಲನಚಿತ್ರ ಗಾಯನ ಸ್ಪರ್ಧೆ

ಕೆಂಗೇರಿ,ಆ.೪- ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನೋಡಿ ಸಂಗೀತ ಕಲಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಯೂಟ್ಯೂಬ್‌ನಿಂದ ಸಂಪೂರ್ಣವಾಗಿ ಸಂಗೀತ ಕಲಿತಿದ್ದೇನೆ ಎಂಬ ಭ್ರಮೆ ಬಿಟ್ಟು ಶಾಸ್ತ್ರೀಯವಾಗಿ ಅಭ್ಯಾಸ ಮಾಡುವುದು ಒಳಿತು ಎಂದು ಅಂತರಾಷ್ಟ್ರೀಯ ಜನಪದ ಗಾಯಕರಾದ ಜೋಗಿಲ ಸಿದ್ದರಾಜು ತಿಳಿಸಿದ್ದಾರೆ.
ನಗರದ ಮಲ್ಲತಹಳ್ಳಿಯಲ್ಲಿರುವ ಕನ್ಯಾಕುಮಾರಿ ವಿದ್ಯಾಸಂಸ್ಥೆಯಲ್ಲಿ ಗಾನ ಮಾಧುರ್ಯ ಸಾಂಸ್ಕೃತಿಕ ಕಲಾಸಂಘ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಗ್ಯಾಲರಿಯ ಸಹಯೋಗದೊಂದಿಗೆ ರಾಜ್ಯಮಟ್ಟದ ಚಲನಚಿತ್ರ ಕರೋಕೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್. ತುಕಾರಾಂ ಮಾತನಾಡಿ ಸಂಗೀತ ದೇಶ ,ಭಾಷೆ ,ಜಾತಿ, ಧರ್ಮಗಳನ್ನು ಮೀರಿದ್ದು, ಸಂಗೀತದ ಬಗ್ಗೆ ಅಭಿರುಚಿ ಇರುವ ಯಾರೇ ಆಗಲಿ, ಭಾಷೆ ಯಾವುದಾಗಿದ್ದರೂ ಸಂಗೀತ ಕೇಳುವಾಗ ಮತ್ತು ಹಾಡನ್ನು ಆಲಿಸುವಾಗ ತನ್ನಂತಾನೆ ತನ್ನ ಕತ್ತನ್ನು ನಾದಕ್ಕೆ ತಕ್ಕಂತೆ ತೂಗಿಸುತ್ತಾನೆ. ತನ್ನ ಕಾಲುಗಳಿಂದ ನೆಲಕ್ಕೆ ಬಡಿಯುತ್ತಾ ಆಸ್ವಾದಿಸುತ್ತಾನೆ. ಸಂಗೀತ ಎನ್ನುವುದು ಮನಸ್ಸಿಗೆ ಮುದ ನೀಡುವ ಒಂದು ಸಾಧನ. ಅದನ್ನು ಪ್ರೀತಿಯಿಂದ ಆಲಿಸುವ ಮನಸ್ಸಿರಬೇಕು ಅಷ್ಟೇ ಎಂದರು.
ಕಾರ್ಯಕ್ರಮದಲ್ಲಿ ಗಾಯಕಿಯರಾದ ಸುರೇಖಾ ಮತ್ತು ಪ್ರಭ ಇನಾಂದರ್‌ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಣ್ಣಗೌಡ ಮತ್ತು ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.