ರಾಜ್ಯಮಟ್ಟದ ಕೃಷಿ ಜಾಗೃತ ಕೋಶದಿಂದ ದಾಳಿ: 280 ಕೆ.ಜಿ. ತೂಕದ ರಸಗೊಬ್ಬರ ಜಪ್ತಿ

ವಿಜಯಪುರ, ಸೆ.1-ಜಾಗೃತ ಕೋಶ ಸಚಿವಾಲಯದ ಅಪರ ಕೃಷಿ ನಿರ್ದೇಶಕರಾದ ಅನೂಪ ಕೆ.ಜಿ. ನೇತೃತ್ವದಲ್ಲಿ ಹಾಗೂ ಜಾಗೃತ ಕೋಶ ಸಚಿವಾಲಯದ ಬೆಳಗಾವಿ ವಿಭಾಗದ ಜಂಟಿ ಕೃಷಿ ನಿರ್ದೇಶಕರಾದ ಜಲಾನಿ ಮೋಕಾಶಿ ಅವರನ್ನೊಳಗೊಂಡ ಹಾಗೂ ಕೃಷಿ ಇಲಾಖೆ ವಿಜಯಪುರದ ವಿವಿಧ ಅಧಿಕಾರಿಗಳ ತಂಡವು ವಿಜಯಪುರ ನಗರದ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತು.
ಅಧಿಸೂಚನೆಗೊಳಿಸದ ಹಾಗೂ ಪರವಾನಿಗೆಯಲ್ಲಿ ಅನುಮತಿಸದೇ ಇರುವ ಜಿಂಕ್ ಮತ್ತು ಬೋರಾನ್ ಮಿಶ್ರಣ ಇ.ಡಿ.ಟಿ.ಎ. ಮತ್ತು ಅನುಮೋದಿಸದೇ ಇರುವ ವಿವಿಧ ಲಘು ಪೋಷಕಾಂಶ ಮಿಶ್ರಣ ರಸಗೊಬ್ಬರ ಒಳಗೊಂಡಂತೆ ಒಟ್ಟು 96,290 ರೂ. ಕಿಮ್ಮತ್ತಿನ 280 ಕೆ.ಜಿ. ತೂಕದ ವಿವಿಧ ರಸಗೊಬ್ಬರಗಳನ್ನು ದಾಳಿಯ ಸಂದರ್ಭದಲ್ಲಿ ಜಪ್ತಿ ಮಾಡಲಾಯಿತು.
ಇಂಡಿ, ಚಡಚಣ, ಬಸವನಬಾಗೇವಾಡಿ ಮತ್ತು ಕೋಲಾರ ತಾಲೂಕಿನ ವಿವಿಧ ಪರಿಕರಗಳ ಮಾರಾಟ ಮಳಿಗೆಗಳನ್ನು ಇದೆ ವೇಳೆ ಪರಿಶೀಲಿಸಲಾಯಿತು. ಸಣ್ಣ ನೂನ್ಯತೆಗಳು ಕಂಡು ಬಂದ ಮಾರಾಟಗಾರರಿಗೆ ಪರಿಕರಗಳನ್ನು ಮಾರಾಟ ಮಾಡದಂತೆ ಮಾರಾಟ ತಡೆ ಆಜ್ಞೆಯನ್ನು ನೀಡಲಾಯಿತು. ಹಾಗೂ ಕೀಟನಾಶಕ ಮತ್ತು ಪೋಷಕಾಂಶ ಶಂಕಿತ 34 ಜೈವಿಕ ಮಾದರಿಗಳನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಪರಿಕರ ಮಾರಾಟಗಾರರಿಗೆ ಸೂಚನೆ: ಅಧಿಸೂಚನೆಗೊಳಿಸದ ಹಾಗೂ ಪರವಾನಿಗೆಯಲ್ಲಿ ಅನುಮತಿಸದೇ ಇರುವ ಲಘು ಪೋಷಕಾಂಶ ಮಿಶ್ರಣ ರಸಗೊಬ್ಬರಗಳನ್ನು ಮಾರಾಟ ಮಾಡದಂತೆ ಇದೆ. ಒಂದು ವೇಳೆ ಮಾರಾಟ ಮಾಡಿ ಕಾನೂನು ಉಲ್ಲಂಘಿಸಿದಲ್ಲಿ ಕ್ರಮ ಜರುಗಿಸಲಾವುದು ಎಂದು ಕೃಷಿ ಅಧಿಕಾರಿಗಳ ತಂಡವು ಎಚ್ಚರಿಕೆ ನೀಡಿತು.ಕಾಯಿದೆ ಉಲ್ಲಂಘಿಸಿದರೆ ಕ್ರಮಃ ಕೃಷಿ ಪರಿಕರ ಮಾರಾಟಗಾರರು ತಮ್ಮ ಮಳಿಗೆ ಮುಂಭಾಗದಲ್ಲಿ ದಾಸ್ತಾನು ಇರುವ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಪ್ರಮಾಣ ಮತ್ತು ದರವನ್ನು ರೈತರಿಗೆ ಸುಲಭವಾಗಿ ಕಾಣಿಸುವ ಹಾಗೂ ಅರ್ಥವಾಗುವ ಹಾಗೆ ಪ್ರದರ್ಶಿಸಬೇಕು.
ಒಂದು ವೇಳೆ ಎಂ.ಆರ್.ಪಿ. ಮುದ್ರಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲಿ,್ಲ ರಸೀದಿ ನೀಡದಿದ್ದಲ್ಲಿ ಮತ್ತು ಕಳಪೆ ಗುಣಮಟ್ಟದ ಪರಿಕರ ಮಾರಾಟ ಮಾಡಿದಲ್ಲಿ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಕಾನೂನಿನ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಇದೆ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.