ರಾಜ್ಯಮಟ್ಟದ ಆನ್‌ಲೈನ್ ಯುವಜನ ಕಾರ್ಯಾಗಾರ

ದಾವಣಗೆರೆ. ನ.೯; ಎಐಡಿವೈಓ ರಾಜ್ಯ ಸಮಿತಿಯು ‘ನಿರುದ್ಯೋಗ ಸಮಸ್ಯೆಯ ವಿರುದ್ಧ ಸಂಘಟಿತರಾಗಿ ಹೋರಾಟ ಕಟ್ಟಲು ಭೂಮಿಕೆಯನ್ನು ಸಿದ್ಧ ಮಾಡಲು ಮತ್ತು ಯುವಜನ ಹೋರಾಟಗಾರರ ತಯಾರಿಗಾಗಿ ರಾಜ್ಯಮಟ್ಟದ ಆನ್‌ಲೈನ್ ಕಾರ್ಯಾಗಾರ ಹಮ್ಮಿಕೊಂಡಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಯುವ ಸಂಘಟನಾಕಾರರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.“ನಮ್ಮ ಸಮಾಜದ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ನಮ್ಮ ದೇಶವು ಜಾತಿ ಮತ್ತು ಧರ್ಮದ ರಾಜಕಾರಣದಿಂದ ವರ್ಗ ರಾಜಕಾರಣದತ್ತ ಸಾಗಬೇಕಿದೆ.” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಂ.ಚಂದ್ರಪೂಜಾರಿ ಅಭಿಪ್ರಾಯಪಟ್ಟರು.

ಅವರು ಎಐಡಿವೈಓ ರಾಜ್ಯಸಮಿತಿಯು ಆಯೋಜಿಸಿದ್ದ ‘ನಿರುದ್ಯೋಗ – ವಿವಿಧ ಆಯಾಮಗಳು ಮತ್ತು ಸಂಘಟಿತ ಹೋರಾಟ’ ಎಂಬ ವಿಷಯದ ಕುರಿತ ರಾಜ್ಯಮಟ್ಟದ ಆನ್‌ಲೈನ್ ಯುವಜನ ಕಾರ್ಯಾಗಾರದಲ್ಲಿ ಮಾತನಾಡಿದರು. ಮುಂದುವರೆದು ಅವರು “ನಮ್ಮ ದೇಶದಲ್ಲಿ ತೀವ್ರವಾದ ನಿರುದ್ಯೋಗ ಇದೆ. 2018ರ ಮಾರ್ಚ್ನಲ್ಲಿ ಕೇಂದ್ರ ಸರ್ಕಾರವು 90,000 ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ 2.8 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು! ನಮ್ಮ ದೇಶದಲ್ಲಿ 100ರಲ್ಲಿ 35 ಮಂದಿಗೆ ಮಾತ್ರ ಉದ್ಯೋಗವಿದೆ. ಅವರಲ್ಲಿ ಶೇ.47ರಷ್ಟು ಸ್ವಉದ್ಯೋಗಿಗಳು. ಶೇ.32ರಷ್ಟು ದಿನಗೂಲಿಗಳು, ಶೇ.4ರಷ್ಟು ಗುತ್ತಿಗೆ ಕಾರ್ಮಿಕರು ಮತ್ತು ಉಳಿದ ಶೇ.17ರಷ್ಟು ಜನರು ಮಾತ್ರ ಸಂಬಳಕ್ಕಾಗಿ ದುಡಿಯುವವರು. ಇವರಲ್ಲಿ ಶೇ.82ರಷ್ಟು ಪುರುಷರ ಮಾಸಿಕ ಸಂಬಳವು ರೂ. 10,000ನ್ನೂ ದಾಟುವುದಿಲ್ಲ. ಕೃಷಿ ಅವಲಂಬಿಸಿರುವವರಲ್ಲಿ ಶೇ.86ರಷ್ಟು ಕೃಷಿಕರ ಮಾಸಿಕ ಆದಾಯ ಕೇವಲ ರೂ.7095 ಇದೆ.ಒಂದು ಅಧಿಕೃತವಾದ ಅಂಕಿಅAಶಗಳನ್ನು ನೋಡಿ! ನಮ್ಮ ದೇಶದಲ್ಲಿ 2018ರಲ್ಲಿ 130ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದರೆ 65ಕೋಟಿ ಜನ ಉದ್ಯೋಗ ಕೇಳುತ್ತಿದ್ದಾರೆ.

ಅವರಲ್ಲಿ ಕೇವಲ 52ಕೋಟಿಗೆ ಮಾತ್ರ ಉದ್ಯೋಗ ಸಿಕ್ಕಿದೆ. 13ಕೋಟಿ ಜನ ನಿರುದ್ಯೋಗಿಗಳಿದ್ದಾರೆ. 2020ರ ಜಾಗತಿಕ ಹಸಿವಿನ ಸೂಂಚ್ಯಕದಲ್ಲಿ 107 ದೇಶಗಳಲ್ಲಿ ಭಾರತದ ಸ್ಥಾನ 94ರಲ್ಲಿದೆ. ನೇಪಾಳ 73, ಶ್ರೀಲಂಕಾ 64, ಪಾಕಿಸ್ತಾನ 88ನೇ ಸ್ಥಾನದಲ್ಲಿವೆ. ಇಂಡಿಯನ್ ಅಗ್ರಿಕಲ್ಚರ್ ಆರ್ಗನೈಸೇಷನ್ ಸರ್ವೆ ಪ್ರಕಾರ ಶೇ.39ರಷ್ಟು ಜನರಿಗೆ ನಮ್ಮ ದೇಶದಲ್ಲಿ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಮತ್ತು ಆರೋಗ್ಯಯುತ ಆಹಾರದ ಕೊರತೆ ಇರುವವರ ಸಂಖ್ಯೆ ಶೇ.78 ಇದೆ.  ಇದು ನಿರುದ್ಯೋಗದ ಭೀಕರ ಪರಿಣಾಮವಾಗಿದೆ.ನಮ್ಮ ದೇಶದ ಶೇ.77 ರಷ್ಟು ಸಂಪತ್ತು ಕೇವಲ ಶೇ.10ರಷ್ಟಿರುವ ಆಗರ್ಭ ಶ್ರೀಮಂತರ ಕೈಲಿದೆ. ಕೆಳಗಿನ ಶೇ.66 ಜನರಲ್ಲಿ ಕೇವಲ ಶೇ.5ರಷ್ಟು ಸಂಪತ್ತು ಹಂಚಿಹೋಗಿದೆ. ನಮ್ಮ ಅಭಿವೃದ್ಧಿಯ ಗುರಿ ಜಿಡಿಪಿ ಬೆಳವಣಿಗೆಯ ಬದಲು ಮಾನವ ಅಭಿವೃದ್ಧಿ ಕಡೆಗಿರಬೇಕು. ಅದಕ್ಕಾಗಿ ಆರ್ಥಿಕತೆಯಲ್ಲಿ ಕೃಷಿಗೆ ಪ್ರಧಾನವಾದ ಆದ್ಯತೆ ಸಿಗಬೇಕು. ಕಾರ್ಪೊರೇಟ್‌ಗಳ ಕೈಲಿರುವ ಮಾಧ್ಯಮದ ಒಡೆತನ ಮತ್ತು ಹಿಡಿತ ತಪ್ಪಿಸಬೇಕು. ಹೆಚ್ಚು ಬಂಡವಾಳ ತೊಡಗಿಸುವ ಉದ್ದಿಮೆಗಳ ಬದಲಿಗೆ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದಿಮೆಗಳಿಗೆ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಯುವ ಸಮುದಾಯ ಹೋರಾಟ ಬೆಳೆಸಬೇಕು” ಎಂದರು.ಎಐಡಿವೈಓದ ಅಖಿಲ ಭಾರತ ಅಧ್ಯಕ್ಷರಾದ ಕಾ. ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ “ನಿರುದ್ಯೋಗದಿಂದ ನರಳುವ ಪ್ರತಿಯೊಬ್ಬ ಯುವಕನೂ ಅದಕ್ಕೆ ಸಂಬAಧಿಸಿದ ಆರ್ಥಿಕ ಸಾಮಾಜಿಕ-ರಾಜಕೀಯ ಆಯಾಮದ ಎಲ್ಲ ಮಗ್ಗಲುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅದನ್ನು ನಿವಾರಿಸುವುದು ಅಸಾಧ್ಯ.
ಮಾನವ ಸಮಾಜದ ಇತಿಹಾಸದ ಪ್ರತಿಯೊಂದು ಘಟ್ಟದಲ್ಲೂ ಯುವಜನರಿದ್ದರು. ಅವರಲ್ಲಿ ಅಸ್ತಿತ್ವದಲ್ಲಿದ್ದ ನಂಬಿಕೆ ಮತ್ತು ವಾದಗಳನ್ನು ಒಪ್ಪಿಕೊಂಡಿದ್ದ ಒಂದು ದೊಡ್ಡ ಗುಂಪು ಒಂದೆಡೆಯಾದರೆ ಆ ವ್ಯವಸ್ಥೆಯ ಕುರುಡು ನಂಬಿಕೆಗಳನ್ನು, ಅಸ್ತಿತ್ವದಲ್ಲಿದ್ದ ಅಧಿಕಾರಶಾಹಿ ಶೋಷಣೆಯನ್ನು ಪ್ರಶ್ನಿಸಿ ಹೋರಾಡಿದ ಮತ್ತೊಂದು ಕ್ರಾಂತಿಕಾರಿ ಯುವಜನ ಪಡೆ ಇದ್ದೇ ಇದ್ದಿತು. ಇದುವರೆಗಿನ ಎಲ್ಲಾ ಪ್ರಗತಿಗಾಮಿ ಬದಲಾವಣೆ ಅಂತಹ ಕ್ರಾಂತಿಕಾರಿ ಪಡೆಯಿಂದ ಆಗಿದೆ. ಈಗಲೂ ಸಹ ಇದರ ಅವಶ್ಯಕತೆ ಇದೆ.ನಿರುದ್ಯೋಗ ಸಮಸ್ಯೆ ಇಂದು ಭೀಕರವಾಗಿದೆ. ಆದರೆ ಸರ್ಕಾರಗಳ ನೀತಿಗಳು ಬಂಡವಾಳಗಾರರನ್ನು ಇನ್ನಷ್ಟು ಬಲಿಷ್ಟರನ್ನಾಗಿ ಮಾಡುವ ದಿಕ್ಕಿನಲ್ಲಿದೆ. ಸಾಮಾನ್ಯ ಜನತೆಯ ಜೀವನವು ದಿನೇದಿನೇ ದುರ್ಭರವಾಗುತ್ತಿದ್ದರೆ, ಬಂಡವಾಳಶಾಹಿಗಳು ದೊಡ್ಡ ಪ್ರಮಾಣದಲ್ಲಿ ಬಲಿತು ಬೆಳೆದಿದ್ದಾರೆ. ರೈತಾಪಿಗಳಿಗೆ ಹತ್ತಿಪ್ಪತ್ತು ಸಾವಿರ ರೂ. ಸಾಲ ಕೊಡಲು ಸತಾಯಿಸುವ ಬ್ಯಾಂಕುಗಳು ಬಂಡವಾಳಗಾರರಿಗೆ ಕೋಟ್ಯಾಂತರ ರೂ.ಗಳ ಸಾಲವನ್ನು ಸಲೀಸಾಗಿ ಕೊಡುತ್ತವೆ. ಅಷ್ಟೇ ಸಲೀಸಾಗಿ ಅವರ ಸಾಲವನ್ನು ಮನ್ನಾ ಕೂಡ ಮಾಡುತ್ತವೆ. ಆದರೆ ಈ ರೀತಿ ಬಲಿಯುತ್ತಿರುವ ಬಂಡವಾಳಶಾಹಿಗಳು ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ಕೆಲಸ ಕೇಳುವ ಯುವಕರ ಮೇಲೆ ಸರ್ಕಾರಗಳು ಲಾಠಿಚಾರ್ಜ್ ಮಾಡಿಸುತ್ತವೆ. ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳು ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಗಳು. ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಉದ್ಯೋಗಗಳನ್ನೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರ್ತಿಮಾಡುತ್ತಿಲ್ಲ. ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರಗಳು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಬದಲಿಗೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ಲಾಭದಾಯಕವಾಗಿ ನಡೆಯುತ್ತಿದ್ದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ. ನಿರುದ್ಯೋಗ ನಿವಾರಣೆಗೆ ತಡೆರಹಿತವಾಗಿ ಕೈಗಾರಿಕೀಕರಣ ನಡೆಯಬೇಕು. ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇರುವ ಉದ್ದಿಮೆಗಳನ್ನು ಉಳಿಸಿಕೊಂಡು ನಿಯಮಿತವಾಗಿ ಉದ್ಯೋಗಗಳನ್ನು ಸೃಷ್ಟಿಸಬಹುದು. ಸರ್ಕಾರಗಳು ಅತ್ತ ಗಮನಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಎನ್‌ಡಿಎ ಮತ್ತು ಯುಪಿಎಗಳ ನಿಲುವುಗಳಲ್ಲಿ ಯಾವುದೇ ಭಿನ್ನತೆ ಇಲ್ಲ. ದೇಶವನ್ನು ಆಳಿದ ಎಲ್ಲ ಸರ್ಕಾರಗಳು ಸಾಲ ತಂದು ದೇಶೀಯ ಬಂಡವಾಳಿಗರಿಗೆ ಅಪಾರ ನೆರವು ನೀಡುತ್ತವೆ. ನರೇಂದ್ರ ಮೋದಿಯವರ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲವು 52 ಲಕ್ಷ ಕೋಟಿ ರೂ. ತಲುಪಿದೆ. ಪ್ರತಿವರ್ಷದ ಬಜೆಟ್ ಹಣದಲ್ಲಿ ಶೇ.32ರಿಂದ 34ರಷ್ಟು ಹಣ ಈ ಸಾಲದ ಬಡ್ಡಿ ಕಟ್ಟಲು ವ್ಯಯವಾಗುತ್ತದೆ. ಆದರೆ ಸರ್ಕಾರದ ಆದಾಯದಲ್ಲಿ ಶೇ.90ರಷ್ಟು ಹಣ ಜನಸಾಮಾನ್ಯರಿಂದ ವಿವಿಧ ತೆರಿಗೆಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಅಂದರೆ ಜನರ ಹಣ ಬಂಡವಾಳಿಗರಿಗಾಗಿ ಮಾಡಿದ ಸಾಲದ ಬಡ್ಡಿ ಕಟ್ಟಲು ವ್ಯಯವಾಗುತ್ತಿದೆ.ಇಂತಹ ಸಂದರ್ಭದಲ್ಲಿ ಉದ್ಯೋಗಗಳ ಸೃಷ್ಟಿಗಾಗಿ ಮೊದಲು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಯೋಗ ಸೃಷ್ಟಿಮಾಡದ ಬಂಡವಾಳಿಗರಿಗೆ ನೀಡಿರುವ ತೆರಿಗೆ ರಿಯಾಯಿತಿಗಳನ್ನು ಮತ್ತು ಸೌಲಭ್ಯಗಳನ್ನು ವಾಪಾಸು ತೆಗೆದುಕೊಳ್ಳಬೇಕು. ಬ್ಯಾಂಕ್ದ‌ ಗಳಿಂದ ಸಾಲಪಡೆದು ವಂಚಿಸಿರುವ ಬಂಡವಾಳಿಗರಿಂದ ಅವರ ಸಾಲಗಳನ್ನು ವಸೂಲಿ ಮಾಡಬೇಕು. ವಂಚಕರನ್ನು ಜೈಲಿಗಟ್ಟಬೇಕು. “ನಮ್ಮ ದೇಶದ ಸಂಪತ್ತು ನಮ್ಮ ಸಂಪತ್ತು. ನಮ್ಮ ಸಂಪತ್ತಿನಲ್ಲಿ ನಮಗೆ ಪಾಲು ಕೊಡಿ. ಅದನ್ನು ಬಳಸಿಕೊಂಡು ನಮಗೆ ಉದ್ಯೋಗ ಕೊಡಿ” ಎಂಬುದು ನಮ್ಮ ಘೋಷವಾಕ್ಯವಾಗಬೇಕು.ನಿರುದ್ಯೋಗದಿಂದ ನರಳುತ್ತಿರುವ ಯುವಜನರಲ್ಲಿ ಕೇವಲ ಶೇ.10ರಷ್ಟು ಮಾತ್ರ ಈ ಹೋರಾಟಕ್ಕೆ ಸಂಘಟಿತರಾಗಿ ಧುಮುಕಿದರೂ ಸಾಕು, ನಮ್ಮ ಸಂಸತ್ತು ಮತ್ತು ವಿಧಾನಸಭೆಗಳು ನಡುಗುತ್ತವೆ. ಕೇವಲ ಕೆಲವರಿಗೆ ಉದ್ಯೋಗ ಸಿಕ್ಕಮಾತ್ರಕ್ಕೆ ನಾವು ತೃಪ್ತರಾಗಬಾರದು. ಒಂದು ವೇಳೆ ಸಂಸತ್ತು ಮತ್ತು ವಿಧಾನಸಭೆಗಳು ನಮ್ಮ ಸಮಸ್ಯೆಗಳ ಕುರಿತು ಚರ್ಚಿಸದಿದ್ದಲ್ಲಿ ಅಂಥ ಸಂಸದೀಯ ವ್ಯವಸ್ಥೆಯನ್ನು ಕಿತ್ತೊಗೆದು ಭಗತ್‌ಸಿಂಗ್, ನೇತಾಜಿ ಕಂಡ ಕನಸಿನ ಸಮಾಜವಾದಿ ಸಮಾಜದ ಸ್ಥಾಪನೆಗಾಗಿ ಕ್ರಾಂತಿ ಮಾಡಲು ನಾವು ಸಜ್ಜಾಗಬೇಕು. ಅದಕ್ಕಾಗಿ ದೇಶದ ಮೂಲೆಮೂಲೆಗಳಲ್ಲಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ನಾವು ಬಲಿಷ್ಟ ಹೋರಾಟವನ್ನು ಕಟ್ಟಬೇಕು” ಎಂದು ಅವರು ಕರೆ ನೀಡಿದರು.ಕಾರ್ಯಾಗಾರದಲ್ಲಿ ಎಐಡಿವೈಓದ ರಾಜ್ಯ ಕಾರ್ಯದರ್ಶಿ ಡಾ. ಜಿ.ಎಸ್.ಕುಮಾರ್ ಮತ್ತು  ಎಐಡಿವೈಓದ ರಾಜ್ಯಾಧ್ಯಕ್ಷರಾದ ಎಂ. ಉಮಾದೇವಿ  ಮಾತನಾಡಿದರು. ಎಐಡಿವೈಓದ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಲಕ್ಷö್ಮಣ್ ಜಡಗನ್ನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೋರ್ವ ರಾಜ್ಯ ಉಪಾಧ್ಯಕ್ಷರಾದ ಕಾ.ಶರಣಪ್ಪ ಉದ್ಬಾಳ್ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.