ರಾಜ್ಯಪಾಲರ ಭೇಟಿ ಮಾಡಿದ ಬೊಮ್ಮಾಯಿ-ಅಶೋಕ್

ಬೆಂಗಳೂರು.ಏ.೨೦- ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ಕೈಗೊಳ್ಳಬೇಕಾದ ಬಿಗಿ ಕ್ರಮದ ಬಗ್ಗೆ ರಾಜ್ಯಪಾಲರು, ಸರ್ವಪಕ್ಷಗಳ ಮುಖಂಡರ ಸಭೆಯನ್ನು ಇಂದು ಸಂಜೆ ಕರೆದಿರುವ ಬೆನ್ನಲ್ಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಈ ಇಬ್ಬರು ಸಚಿವರು ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಸೋಂಕಿತರ ಚಿಕಿತ್ಸೆಗೆ ಮಾಡಿರುವ ವ್ಯವಸ್ಥೆ ಎಲ್ಲವನ್ನೂ ರಾಜ್ಯಪಾಲರ ಗಮನಕ್ಕೆ ತಂದರು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ೨ನೇ ಅಲೆ ಹರಡುವಿಕೆ ಹೆಚ್ಚಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಕೆಲ ಸಮಸ್ಯೆಗಳಾಗಿವೆ ಎಲ್ಲವನ್ನೂ ಪರಿಹರಿಸುವತ್ತ ಗಮನ ಹರಿಸಿದ್ದೇವೆ. ಇನ್ನೆರೆಡು ಮೂರು ದಿನಗಳಲ್ಲಿ ಎಲ್ಲವೂ ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗಲಿದೆ ಎಂಬುದನ್ನು ರಾಜ್ಯಪಾಲರ ಅವಗಾನೆಗೆ ತರಲಾಯಿತು.
ಸಂಜೆ ಸರ್ವ ಪಕ್ಷಗಳ ಸಭೆ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಕೆಲ ಮಾಹಿತಿಗಳನ್ನು ನೀಡಲು ಅವರನ್ನು ಭೇಟಿಯಾಗಿದ್ದೆವು. ಇದು ಸೌಜನ್ಯದ ಭೇಟಿ ಎಂದು ಸಚಿವ ಆರ್. ಅಶೋಕ್ ಹೇಳಿದರು.